ಚೆನ್ನೈ: ನಗರದಲ್ಲಿ ಮಹಿಳೆಯೊಬ್ಬರು ಪ್ರಯಾಣಿಸಿದ ಆಟೋ ರಿಕ್ಷಾದ ಅನುಭವ ಮತ್ತು ಆ ಆಟೋದ ಚಾಲಕನ ಹಿನ್ನೆಲೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್‌ಸ್ಟಾಗ್ರಾಮ್‌ನ ‘@the_dharani_theory’ ಎಂಬ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ, ಚೆನ್ನೈನ ಶೋಲಿಂಗನಲ್ಲೂರ್‌ನಲ್ಲಿ ಶೇರ್ ಆಟೋ ಹತ್ತಿದ ಮಹಿಳೆಯೊಬ್ಬರು ತಮಗಾದ ಮರೆಯಲಾಗದ ಹಾಗೂ ವಿಸ್ಮಯಕಾರಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಆಟೋದ ಒಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸೌಲಭ್ಯಗಳನ್ನು ಕಂಡು ಆಕೆ ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ. ಆ ಆಟೋದಲ್ಲಿ ದಿನಪತ್ರಿಕೆಗಳು, ಉನ್ನತ ನಿಯತಕಾಲಿಕೆಗಳಾದ ಫ್ರಂಟ್‌ಲೈನ್, ಫೆಮಿನಾ, ಔಟ್‌ಲುಕ್ ಮತ್ತು ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಸಾಮಗ್ರಿಗಳನ್ನಿಡಲಾಗಿತ್ತು. ಅಷ್ಟೇ ಅಲ್ಲದೆ, ಪ್ರಯಾಣಿಕರ ಬಳಕೆಗಾಗಿ 2 ವರ್ಕಿಂಗ್ ಐಪ್ಯಾಡ್‌ಗಳು, ಉಚಿತ ಚಾಕೊಲೇಟ್‌ಗಳು, ಛತ್ರಿಗಳು, ಮಿನಿ ಕೂಲರ್, ಕಾಫಿ ಫ್ಲಾಸ್ಕ್ ಹಾಗೂ ಉಚಿತ ವೈ-ಫೈ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

ಈ ಆಟೋದ ಮತ್ತೊಂದು ವಿಶೇಷವೆಂದರೆ, ಅದರ ಒಳಗೆ “ದಾದಿಯರು, ಸ್ವಚ್ಛತಾ ಕಾರ್ಮಿಕರು, ಶಿಕ್ಷಕರು ಮತ್ತು ವೈದ್ಯರಿಗೆ ಉಚಿತ ಪ್ರಯಾಣ” ಎಂಬ ಫಲಕವನ್ನು ಹಾಕಲಾಗಿತ್ತು. ಇಂಗ್ಲಿಷ್ ಸೇರಿದಂತೆ ಬರೋಬ್ಬರಿ 7 ಭಾಷೆಗಳನ್ನು ಮಾತನಾಡುವ ಅಣ್ಣಾದೊರೈ ಎಂಬ ಹೆಸರಿನ ಈ ಚಾಲಕ, ಸದಾ ನಗುಮುಖದಿಂದ ಪ್ರಯಾಣಿಕರನ್ನು ರಂಜಿಸುತ್ತಾ ಆಟೋ ಚಲಾಯಿಸುತ್ತಾರೆ. ಪ್ರಯಾಣದ ಕೊನೆಯಲ್ಲಿ ಮತ್ತೊಬ್ಬ ಪ್ರಯಾಣಿಕರು ಈ ಚಾಲಕನನ್ನು ಗುರುತಿಸಿ, 2 ವರ್ಷಗಳ ಹಿಂದೆ ತಮ್ಮ ಕಾಲೇಜಿಗೆ ಇವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ನೆನಪಿಸಿಕೊಂಡಾಗ ಆಟೋದಲ್ಲಿದ್ದ ಮಹಿಳೆಗೆ ಮತ್ತೊಂದು ಅಚ್ಚರಿ ಕಾದಿತ್ತು. ಕೇವಲ ಕೆಲವೇ ನಿಮಿಷಗಳ ಸಂಭಾಷಣೆಯ ನಂತರ ಈ ಸಾಮಾನ್ಯ ಆಟೋ ಚಾಲಕ ಕೇವಲ ಚಾಲಕನಲ್ಲ, ಬದಲಿಗೆ ಬರೋಬ್ಬರಿ 7 ಬಾರಿ ಟೆಡ್ಎಕ್ಸ್ (TEDx) ವೇದಿಕೆಗಳಲ್ಲಿ ಭಾಷಣ ಮಾಡಿದ ಪ್ರಖ್ಯಾತ ಸ್ಪೀಕರ್ ಹಾಗೂ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳಲ್ಲಿ ಉಪನ್ಯಾಸ ನೀಡಿದ ಸಾಧಕ ಎಂಬ ಅಸಲಿ ಸತ್ಯ ಹೊರಬಿದ್ದಿದೆ.
ತಮ್ಮ ಆಟೋ ಪ್ರಯಾಣವನ್ನು ಒಂದು ಮರೆಯಲಾಗದ ಅನುಭವವನ್ನಾಗಿ ಪರಿವರ್ತಿಸಿದ್ದಕ್ಕಾಗಿ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಣ್ಣಾದೊರೈ ಅವರಿಗೆ, ಈ ಪ್ರಯಾಣಿಕ ಮಹಿಳೆಯು ತಾವು ವೃತ್ತಿಯಲ್ಲಿ ಶಿಕ್ಷಕಿ ಮತ್ತು ವೈದ್ಯೆ ಎಂದು ಹೇಳಿದಾಗ ಅವರು ಪ್ರಯಾಣದ ಹಣವನ್ನು ತೆಗೆದುಕೊಳ್ಳಲು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಈ ಅಪರೂಪದ ಭೇಟಿಯ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ಮಹಿಳೆ, ನಾವೆಲ್ಲರೂ ನಮ್ಮ ಕೆಲಸದ ಬಗ್ಗೆ ಸದಾ ದೂರು ನೀಡುತ್ತಿರುತ್ತೇವೆ, ಆದರೆ ಅಣ್ಣಾ ಅವರು ತಮ್ಮ ವೃತ್ತಿಯನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾರೆ ಮತ್ತು ಕೆಟ್ಟ ದಿನಗಳಲ್ಲೂ ಹೇಗೆ 100 ರಷ್ಟು ಪ್ರಾಮಾಣಿಕ ಶ್ರಮ ಹಾಕುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಹೇಗೆ ಯಶಸ್ಸು ಕಾಣಬಹುದು ಎಂಬುದಕ್ಕೆ ಇವರೇ ಸಾಕ್ಷಿ ಎಂದು ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಇವರನ್ನು ನಿಜ ಜೀವನದ ರಿಯಲ್ ಹೀರೋ ಮತ್ತು ಪ್ರತಿಯೊಬ್ಬರಿಗೂ ದೊಡ್ಡ ಸ್ಫೂರ್ತಿ ಎಂದು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.


Leave a Reply