ನದಿ ತಿರುವು ಯೋಜನೆ ವಿರುದ್ಧ ಹಳ್ಳಿ ಹಳ್ಳಿಗಳಲ್ಲೂ ಹೋರಾಟದ ಕಿಚ್ಚು: ನ.3ರ ಹೆದ್ದಾರಿ ತಡೆ ಯಶಸ್ಸಿಗೆ ಪ್ರತಿ ಹಳ್ಳಿಯಲ್ಲೂ ಸಜ್ಜಾಗುತ್ತಿದೆ ಪ್ರತಿರೋಧದ ಜಾಗೃತಿ ಸಭೆ!

ಹಂಚಿಕೊಳ್ಳಿ

ನದಿ ತಿರುವು ಯೋಜನೆ ವಿರೋಧಿ ಹೋರಾಟಕ್ಕೆ ಸಿದ್ಧತೆ: ನ.3ರಂದು ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಸಭೆ; ಹೋರಾಟದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಸಮಿತಿ ಮನವಿ

ಯಲ್ಲಾಪುರ: ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನವೆಂಬರ್ 3ರಂದು ಯಲ್ಲಾಪುರ ಪಟ್ಟಣದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದ ಪೂರ್ವಸಿದ್ಧತಾ ಸಭೆ ಟಿಎಂಎಸ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ನದಿ ತಿರುವು ಯೋಜನೆ ಸ್ಥಗಿತಗೊಳ್ಳುವಂತೆ ಸರ್ಕಾರದ ಗಮನ ಸೆಳೆಯಲು ರೂಪಿಸಿರುವ ಹೋರಾಟ ಯಶಸ್ವಿಯಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ರಸ್ತೆ ತಡೆ ಹೋರಾಟದ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನದಿ ತಿರುವು ಯೋಜನೆಯಿಂದ ಪರಿಸರ ಹಾಗೂ ಜನಜೀವನದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಲು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ಸಭೆಗಳ ಆಯೋಜನೆ

ಹೋರಾಟದ ಕುರಿತು ಜನಜಾಗೃತಿ ಮೂಡಿಸಲು ಅಕ್ಟೋಬರ್ 14ರಿಂದ ವಿವಿಧ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಅಕ್ಟೋಬರ್ 14ರಂದು ಮಧ್ಯಾಹ್ನ 3 ಗಂಟೆಗೆ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ, ಸಂಜೆ 5 ಗಂಟೆಗೆ ವಜ್ರಳ್ಳಿ ಸೊಸೈಟಿ ಸಭಾಭವನದಲ್ಲಿ ಹಾಗೂ ಸಂಜೆ 6.30ಕ್ಕೆ ಚಿನ್ನಾಪುರದ ಚಿನ್ನೇಶ್ವರ ದೇವಸ್ಥಾನದಲ್ಲಿ ಸಭೆಗಳು ನಡೆಯಲಿವೆ.

ಅಕ್ಟೋಬರ್ 15ರಂದು ಮಧ್ಯಾಹ್ನ 3 ಗಂಟೆಗೆ ದೇಹಳ್ಳಿ ಸೊಸೈಟಿ ಸಭಾಭವನದಲ್ಲಿ, ಸಂಜೆ 4.30ಕ್ಕೆ ಆನಗೋಡ ಸೊಸೈಟಿ ಸಭಾಭವನದಲ್ಲಿ, ಸಂಜೆ 6.30ಕ್ಕೆ ಕಣ್ಣಿಗೇರಿ ಸೊಸೈಟಿ ಸಭಾಭವನದಲ್ಲಿ ಹಾಗೂ ರಾತ್ರಿ 8 ಗಂಟೆಗೆ ನಂದೊಳ್ಳಿಯ ಸಾರ್ವಜನಿಕ ಗಜಾನನೋತ್ಸವ ಕಟ್ಟಡದಲ್ಲಿ ಸಂಪರ್ಕ ಸಭೆಗಳನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 16ರಂದು ಮಧ್ಯಾಹ್ನ 3 ಗಂಟೆಗೆ ಕುಂದರಗಿ ಸೊಸೈಟಿಯಲ್ಲಿ, ಸಂಜೆ 4.30ಕ್ಕೆ ಉಮ್ಮಚಗಿ ಸೊಸೈಟಿಯಲ್ಲಿ, ಸಂಜೆ 6 ಗಂಟೆಗೆ ಹಿತ್ಲಳ್ಳಿ ಸೊಸೈಟಿಯಲ್ಲಿ ಹಾಗೂ ರಾತ್ರಿ 7.30ಕ್ಕೆ ಹಾಸಣಗಿ ಸೊಸೈಟಿ ಸಭಾಭವನದಲ್ಲಿ ಸಭೆಗಳು ನಡೆಯಲಿವೆ.

ಅಕ್ಟೋಬರ್ 18ರಂದು ಮಧ್ಯಾಹ್ನ 3 ಗಂಟೆಗೆ ಕಿರವತ್ತಿಯಲ್ಲಿ, ಸಂಜೆ 5 ಗಂಟೆಗೆ ಹುಣಶೆಟ್ಟಿಕೊಪ್ಪದಲ್ಲಿ ಹಾಗೂ ಸಂಜೆ 7 ಗಂಟೆಗೆ ಉಪಳೇಶ್ವರದಲ್ಲಿ ಸಂಪರ್ಕ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಅಕ್ಟೋಬರ್ 21ರಂದು ಮಧ್ಯಾಹ್ನ 3.30ಕ್ಕೆ ಮುಂಡಗೋಡ ತಾಲೂಕಿನ ಬೆಡಸಗಾಂವದಲ್ಲಿ ಹಾಗೂ ಸಂಜೆ 5 ಗಂಟೆಗೆ ಪಾಳಾದಲ್ಲಿ ಸಭೆಗಳು ನಡೆಯಲಿವೆ. ಅಕ್ಟೋಬರ್ 22ರಂದು ಮಧ್ಯಾಹ್ನ 3.30ಕ್ಕೆ ಯಲ್ಲಾಪುರದ ಎಲ್.ಎಸ್.ಎಂ.ಪಿ. ಸೊಸೈಟಿ ಸಭಾಭವನದಲ್ಲಿ ಪಟ್ಟಣ ವ್ಯಾಪ್ತಿಯ ಸಂಪರ್ಕ ಸಭೆ ಆಯೋಜಿಸಲಾಗಿದೆ.

ಅಕ್ಟೋಬರ್ 23ರಂದು ಮಧ್ಯಾಹ್ನ 3.30ಕ್ಕೆ ಹಳಿಯಾಳ ತಾಲೂಕಿನ ಭಾಗವತಿ, ಡೌಗಿನಾಲಾ ಹಾಗೂ ಸಾಂಬ್ರಾಣಿ ಭಾಗಗಳಲ್ಲಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ.

ಸರ್ಕಾರಕ್ಕೆ ವಿರೋಧದ ಸಂದೇಶ ತಲುಪಿಸಲು ಕರೆ

ಎಲ್ಲ ಪ್ರದೇಶಗಳ ಜನರನ್ನು ಸಂಪರ್ಕಿಸಿ, ಯೋಜನೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಬೇಕು. ಆ ಮೂಲಕ ನದಿ ತಿರುವು ಯೋಜನೆಯ ವಿರುದ್ಧದ ಜನಾಭಿಪ್ರಾಯವನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಲುಪಿಸಬೇಕು ಎಂದು ಹರಿಪ್ರಕಾಶ ಕೋಣೆಮನೆ ಕರೆ ನೀಡಿದರು.

ಸಭೆಯಲ್ಲಿ ಹೋರಾಟದ ಮುಂದಿನ ಕಾರ್ಯಯೋಜನೆ, ಜನರನ್ನು ಸಂಘಟಿಸುವ ವಿಧಾನ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ, ರಸ್ತೆ ತಡೆ ಸಮಿತಿ ಸಂಚಾಲಕರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿ.ಟಿ. ಹೆಗಡೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ರವಿ ಭಟ್ಟ ಬಿಡಾರ, ರಾಘವೇಂದ್ರ ಭಟ್ಟ, ರಘುಪತಿ ಹೆಗಡೆ, ನಾಗರಾಜ ಕವಡಿಕೇರಿ, ಕೆ.ಟಿ. ಹೆಗಡೆ, ಶ್ರೀರಾಮ ಲಾಲಗುಳಿ, ಶ್ರೀಧರ ಅಣಲಗಾರ, ಭಾಸ್ಕರ ಸಿದ್ದಿ, ಗೋಪಾಲಕೃಷ್ಣ ಗಾಂವ್ಕರ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *