ಯಲ್ಲಾಪುರ: ವಜ್ರಳ್ಳಿಯ ಸರ್ವೋದಯ ಮೈದಾನದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಡೈಮಂಡ್ ಕಪ್ ವಾಲಿಬಾಲ್ ಟೂರ್ನಿ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯಲ್ಲಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಡೈಮಂಡ್ ಕಪ್ ವಾಲಿಬಾಲ್ ಟೂರ್ನಿ ಶನಿವಾರ ವಜ್ರಳ್ಳಿಯ ಸರ್ವೋದಯ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಟೂರ್ನಿಯನ್ನು ಉದ್ಘಾಟಿಸಿದ ವಜ್ರಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ವೃದ್ಧಿಯಾಗುತ್ತದೆ. ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಪರಶುರಾಮ, ಮುಖಂಡರಾದ ನವೀನ ಕಿರಗಾರಿ, ಸತೀಶ ಕುಂಬ್ರಿ, ಗುರು ಪೂಜಾರಿ, ಶಂಕರ ಗೌಡ, ರಾಜೇಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಟೂರ್ನಿಯಲ್ಲಿ ಮಹಾಗಣಪತಿ ಹೆಗ್ಗಾರ್ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ಎಂ.ಜಿ. ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ವಜ್ರಳ್ಳಿ ಸ್ಪೈಕರ್ಸ್ ತಂಡ ತೃತೀಯ ಹಾಗೂ ತಿಮ್ಮಾನಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳಲ್ಲಿ ಜೀವನ ಹೆಗ್ಗಾರ್ ಅವರು ಉತ್ತಮ ಹೊಡೆತಗಾರ ಪ್ರಶಸ್ತಿ, ನಿತಿನ್ ಗೌಡ ಅವರು ಆಲ್‌ರೌಂಡರ್ ಪ್ರಶಸ್ತಿ ಹಾಗೂ ಸಚಿನ್ ಹುಲ್ಲೂರು ಅವರು ಉತ್ತಮ ಲಿಫ್ಟರ್ ಪ್ರಶಸ್ತಿ ಪಡೆದುಕೊಂಡರು.

ಸಂಘಟಕರ ಪರವಾಗಿ ಸಿಲ್ವರ್‌ಸ್ಟಾರ್ ಸ್ವಾಗತಿಸಿ, ಗಗನ ಗಾಂವ್ಕರ್ ವಂದಿಸಿದರು.

Leave a Reply

Your email address will not be published. Required fields are marked *