ಶಿರಸಿ: ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕಟ್ಟಡ ಕಾಮಗಾರಿಯ ಹಣ ಪಾವತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ಶಿರಸಿಯ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿದ್ದ ಪೀಠೋಪಕರಣಗಳು ಹಾಗೂ ಕಂಪ್ಯೂಟರ್‌ಗಳು ಸೇರಿದಂತೆ 21 ಬಗೆಯ ಸಾಮಗ್ರಿಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ. ಕಚೇರಿಯ ನಿತ್ಯದ ಕೆಲಸಗಳಿಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿರುವುದರಿಂದ ಸಿಬ್ಬಂದಿಗೆ ಕೆಲಸ ನಿರ್ವಹಿಸಲು ತೊಂದರೆಯಾಗಿದೆ.
ತಾಲೂಕಿನ ಬನವಾಸಿಯಲ್ಲಿರುವ ಹರ್ಡೇಕರ್ ಮಂಜಪ್ಪ ಸಭಾಭವನದ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಗುತ್ತಿಗೆದಾರ ಹಾಗೂ ಎಂಜಿನಿಯರ್ ಎ.ಜಿ. ಭಟ್ ಬೆಳ್ಳೇಕೇರಿ ಅವರು 2000ರಲ್ಲಿ ಸುಮಾರು ₹10 ಲಕ್ಷ ವೆಚ್ಚದ ಕಟ್ಟಡ ಕಾಮಗಾರಿಯನ್ನು ಕೈಗೊಂಡಿದ್ದರು. ನಿಗದಿತ ಕಾಮಗಾರಿಯ ಜತೆಗೆ ಹೆಚ್ಚುವರಿ ಕೆಲಸಗಳನ್ನೂ ಪೂರ್ಣಗೊಳಿಸಿದ್ದರು. ಸಭಾಭವನವನ್ನು 2005ರಲ್ಲಿ ಉದ್ಘಾಟಿಸಲಾಗಿತ್ತು.
ಕಾಮಗಾರಿ ಮುಗಿದು ವರ್ಷಗಳು ಕಳೆದರೂ ಗುತ್ತಿಗೆ ಮೊತ್ತ ಹಾಗೂ ಹೆಚ್ಚುವರಿ ಕಾಮಗಾರಿಯ ಹಣ ಪಾವತಿಯಾಗಿರಲಿಲ್ಲ. ಬಾಕಿ ಹಣಕ್ಕಾಗಿ ಸಂಬಂಧಪಟ್ಟ ಕಚೇರಿಗೆ ಹಲವು ಬಾರಿ ಭೇಟಿ ನೀಡಿದರೂ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಎ.ಜಿ. ಭಟ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೆಚ್ಚುವರಿ ಕಾಮಗಾರಿಯ ಮೊತ್ತ ಮತ್ತು ಬಡ್ಡಿ ಸೇರಿ ಸುಮಾರು ₹21 ಲಕ್ಷ ಬರಬೇಕಿದೆ ಎಂಬುದು ಅವರ ವಾದವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕೆಳಹಂತದ ನ್ಯಾಯಾಲಯ ಗುತ್ತಿಗೆದಾರರ ಪರವಾಗಿ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಧಾರವಾಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ನಲ್ಲಿಯೂ ಗುತ್ತಿಗೆದಾರರ ಪರವಾಗಿಯೇ ಆದೇಶ ಹೊರಬಿದ್ದಿತ್ತು. ಕೆಳಹಂತದ ನ್ಯಾಯಾಲಯದಲ್ಲಿ ಆರ್.ಜಿ. ಹೆಗಡೆ ಕೇರಿಮನೆ ಹಾಗೂ ಹೈಕೋರ್ಟ್‌ನಲ್ಲಿ ಕೆ.ಎಲ್. ಪಾಟೀಲ ಅವರು ಗುತ್ತಿಗೆದಾರರ ಪರ ವಾದ ಮಂಡಿಸಿದ್ದರು.
ಹೈಕೋರ್ಟ್ ಆದೇಶದ ನಂತರವೂ ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮತ್ತೆ ಹಣ ವಸೂಲಿಗಾಗಿ ಪ್ರಯತ್ನಿಸಿದ್ದರು. ಈ ಬೆಳವಣಿಗೆಯ ನಡುವೆ ನ್ಯಾಯಾಲಯದ ಆದೇಶದಂತೆ ಕಚೇರಿಯ ಟೇಬಲ್, ಕುರ್ಚಿ, ಕಂಪ್ಯೂಟರ್‌ಗಳು ಹಾಗೂ ಇತರ ಯಂತ್ರೋಪಕರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದೀರ್ಘಕಾಲದಿಂದ ಬಗೆಹರಿಯದೆ ಉಳಿದಿದ್ದ ಕಾಮಗಾರಿ ಬಾಕಿ ಹಣದ ವಿವಾದ ಇದೀಗ ಸರ್ಕಾರಿ ಕಚೇರಿಯ ಸಾಮಗ್ರಿಗಳ ಜಪ್ತಿಗೆ ಕಾರಣವಾಗಿದೆ.















Leave a Reply