ಗ್ರಾಪಂ ಚುನಾವಣೆಗಾಗಿ ತಾತ್ಕಾಲಿಕ ತಡೆ ನಾಟಕವೇ?: ಸಂಸದ ಕಾಗೇರಿ ಪ್ರಶ್ನೆ

ಹಂಚಿಕೊಳ್ಳಿ

ಉತ್ತರ ಕನ್ನಡ: ಗ್ರಾಮೀಣ ಭಾಗದ ಬಡವರ ಮನೆ ಮತ್ತು ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆಗಸ್ಟ್ 13ರ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿರುವ ಕ್ರಮವನ್ನು ಉತ್ತರಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.

ಮನೆ ನಂಬರ್ ತಂತ್ರಾಂಶ ಹಾಗೂ ಇ-ಸ್ವತ್ತು 2.0 ವ್ಯವಸ್ಥೆಯ ನೆಪದಲ್ಲಿ ಸಾವಿರಾರು ಬಡ ಕುಟುಂಬಗಳು ಆಸ್ತಿ ಹಕ್ಕಿನಿಂದ ವಂಚಿತರಾಗುವ ಆತಂಕವಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ಕ್ರಮದ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜನರ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಹೋರಾಟ ಹಾಗೂ ಜನರ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ ಎಂದು ಕಾಗೇರಿ ಹೇಳಿದ್ದಾರೆ.

ಮುಂಬರುವ ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಕಾಯ್ದೆಗೆ ಯಾವುದೇ ಕಾನೂನುಬದ್ಧ ತಿದ್ದುಪಡಿ ತರದೆ ಕೇವಲ ತಾತ್ಕಾಲಿಕ ತಡೆ ನೀಡಿರುವುದು ಶಾಶ್ವತ ಪರಿಹಾರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಜನರು ಸರ್ಕಾರದ ಈ ಕ್ರಮವನ್ನು ಅರ್ಥಮಾಡಿಕೊಂಡಿದ್ದಾರೆ ಎಂದೂ ತಿಳಿಸಿದ್ದಾರೆ.

ಬಡವರ ಮನೆ ಮತ್ತು ಆಸ್ತಿಗಳಿಗೆ ಶಾಶ್ವತ ಭದ್ರತೆ ಕಲ್ಪಿಸುವ ಉದ್ದೇಶವಿದ್ದರೆ ಸರ್ಕಾರ ತಕ್ಷಣವೇ ಕಾಯ್ದೆಗೆ ಕಾನೂನುಬದ್ಧ ತಿದ್ದುಪಡಿ ತರಬೇಕು ಎಂದು ಕಾಗೇರಿ ಆಗ್ರಹಿಸಿದ್ದಾರೆ. ಅಲ್ಲಿಯವರೆಗೆ ಜಿಲ್ಲೆಯ ಜನರೊಂದಿಗೆ ಸೇರಿ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *