ಯಲ್ಲಾಪುರ: ಮಕ್ಕಳಲ್ಲಿ ಕೌಶಲ್ಯ, ಜಾಣ್ಮೆ ಹಾಗೂ ಚಿಂತನಾ ಸಾಮರ್ಥ್ಯವನ್ನು ಬೆಳೆಸುವಲ್ಲಿ ಚೆಸ್ ಆಟ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯುತ್ ಗುತ್ತಿಗೆದಾರರ ಸಂಘವು ಕಳೆದ ನಾಲ್ಕು ವರ್ಷಗಳಿಂದ ಚೆಸ್ ಪಂದ್ಯಾವಳಿ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಪಟ್ಟಣದ ರೈತ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಜಿಲ್ಲಾ ಮಟ್ಟದ ಓಪನ್ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚೆಸ್ ಮಕ್ಕಳಲ್ಲಿ ಏಕಾಗ್ರತೆ, ತಾರ್ಕಿಕ ಚಿಂತನೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವನ್ನು ಬೆಳೆಸುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಇದೇ ಸಂದರ್ಭದಲ್ಲಿ ಟಿಎಂಎಸ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ ಅವರು ವ್ಯಂಗ್ಯಚಿತ್ರಕಾರ ನಾಗೇಂದ್ರ ಯಲ್ಲಾಪುರ ಅವರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹೆಸ್ಕಾಂ ನೌಕರರ ಸಂಘದ ಶೇಖರ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಚಂದ್ರಹಾಸ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ನಾಗರಿಕ ಸನ್ಮಾನ
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ವೈದ್ಯ ಡಾ. ದೀಪಕ ಭಟ್ಟ, ವೈಟಿಎಸ್ಎಸ್ ಅಧ್ಯಕ್ಷ ರವಿ ಶಾನಭಾಗ, ವರ್ತಕ ವಿಶ್ವನಾಥ ಭಟ್ಟ, ವಕೀಲ ಕೆ.ಎನ್. ಹೆಗಡೆ, ಜವಳಿ ವರ್ತಕ ರವೀಂದ್ರ ಬದ್ದಿ, ಕೃಷಿಕ ಸುಧೀರ ಬಲ್ಸೆ, ಗ್ಯಾಸ್ ಏಜೆನ್ಸಿ ಮಾಲಕ ಅಬ್ದುಲ್ ಖಾದರ್ ಎ. ಶೇಖ್, ಕವಿ ಹಾಗೂ ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಉದ್ಯಮಿ ಸತೀಶ ಹೆಬ್ಬಾರ್, ಯುಕೆ ನೆಚರ್ ಸ್ಟೇ ಮಾಲಕ ನಿರಂಜನ ಭಟ್ಟ ಹಾಗೂ ವ್ಯಂಗ್ಯಚಿತ್ರಕಾರ ನಾಗೇಂದ್ರ ಯಲ್ಲಾಪುರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಕ್ಕಳಲ್ಲಿ ಅಡಗಿರುವ ಜಾಣ್ಮೆ ಮತ್ತು ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಸಂಘವು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಬೆಂಬಲವೇ ಸಂಘಕ್ಕೆ ಶ್ರೀರಕ್ಷೆಯಾಗಿದೆ ಎಂದರು.
ಹೆಸ್ಕಾಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪವಿತ್ರಾ ಆಚಾರಿ ಸನ್ಮಾನಪತ್ರ ವಾಚಿಸಿದರು.















Leave a Reply