500ಕ್ಕೂ ಹೆಚ್ಚು ಕೆರೆಗಳಿಗೆ ನೀರು: ರೈತರ ಬದುಕಿಗೆ ಶಾಶ್ವತ ನೀರಾವರಿ ಕಲ್ಪಿಸುವ ಗುರಿ – ಶಿವರಾಮ ಹೆಬ್ಬಾರ್

ಹಂಚಿಕೊಳ್ಳಿ

ಯಲ್ಲಾಪುರ: ಜನರ ಭಾವನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಕ್ಕಿಂತ ಜನರ ಜೀವನಮಟ್ಟ ಸುಧಾರಿಸುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ತಾಲೂಕಿನ ಮದ್ನೂರು ಪಂಚಾಯಿತಿ ವ್ಯಾಪ್ತಿಯ ಹುಳಗೋಡಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ₹8.78 ಕೋಟಿ ವೆಚ್ಚದ ನೀರಾವರಿ ಯೋಜನೆಯ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದ ಅವರು, ಅಧಿಕಾರಿಗಳಿಂದ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದರು. ಕಾಮಗಾರಿಯನ್ನು ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಯೋಜನೆಯಿಂದ ನಾಲ್ಕು ಕೆರೆಗಳಿಗೆ ನೀರು ತುಂಬಿಸಲಿದ್ದು, ಸುಮಾರು 251 ಹೆಕ್ಟೇರ್ ಪ್ರದೇಶದ ರೈತರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಯೋಜನೆಯಡಿ ಮೂರು ದೊಡ್ಡ ಸಾಮರ್ಥ್ಯದ 125 ಎಚ್‌ಪಿ ಪಂಪ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದಕ್ಕಾಗಿ 500 ಕೆ.ವಿ. ವಿದ್ಯುತ್ ವ್ಯವಸ್ಥೆಯನ್ನೂ ಸ್ಥಾಪಿಸಲಾಗಿದೆ. ನಾಲ್ಕು ಕೆರೆಗಳ ಜೊತೆಗೆ ರೈತರು ನೀರು ಪಡೆಯಲು 10 ಸ್ಥಳಗಳಲ್ಲಿ ವಾಲ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನೀರಾವರಿ ಯೋಜನೆಯ ಫಲಾನುಭವಿಗಳು ಸಂಘವೊಂದನ್ನು ರಚಿಸಿಕೊಂಡು, ಪರಸ್ಪರ ಸಮನ್ವಯದಿಂದ ನೀರು ಹಂಚಿಕೆ ಮಾಡಿಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸ್ಥಳೀಯ ರೈತರಿಗೆ ಹೆಬ್ಬಾರ್ ಸಲಹೆ ನೀಡಿದರು.

ಕಿರವತ್ತಿ, ಕಣ್ಣೀಗೇರಿ, ಮೈನಳ್ಳಿ ಹಾಗೂ ಗುಂಜಾವತಿ ಪಂಚಾಯಿತಿ ವ್ಯಾಪ್ತಿಯಲ್ಲಿ 2,000 ಎಚ್‌ಪಿ ಸಾಮರ್ಥ್ಯದ ಪಂಪ್‌ಗಳನ್ನು ಅಳವಡಿಸಿ 171 ಕೆರೆಗಳಿಗೆ ನೀರು ಪೂರೈಸುವ ಯೋಜನೆಗೆ ₹290 ಕೋಟಿ ವೆಚ್ಚ ಮಾಡಲಾಗಿದೆ. ಮುಂಡಗೋಡು ಭಾಗದಲ್ಲಿ 270 ಕೆರೆಗಳಿಗೆ ನಾಲ್ಕು ಪಂಪ್‌ಹೌಸ್‌ಗಳ ಮೂಲಕ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ. ವರದಾ ನದಿಯಿಂದ ಬನವಾಸಿ ಭಾಗಕ್ಕೆ ನೀರು ತರುವ ಯೋಜನೆಯನ್ನೂ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಯಲ್ಲಾಪುರ ಪಟ್ಟಣದ ಕುಡಿಯುವ ನೀರಿನ ಅಗತ್ಯಕ್ಕಾಗಿ ಬೊಮ್ಮನಹಳ್ಳಿಯಿಂದ ನೀರು ತರುವ ಯೋಜನೆಗೆ ₹100 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಸುಮಾರು ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಅರಬೈಲ್, ಡಬ್ಗುಳಿ, ಗುಳ್ಳಾಪುರ, ಕೆರೆಹೊಸಳ್ಳಿ ಹಾಗೂ ಸೋಮನಳ್ಳಿ ಭಾಗಗಳಲ್ಲಿಯೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರಿಗೆ ನೆರವಾಗಿರುವುದು ತೃಪ್ತಿ ತಂದಿದೆ. ಮಳೆಗಾಲದಲ್ಲಿ ಹರಿದುಹೋಗುವ ನೀರನ್ನು ಸಂಗ್ರಹಿಸಿ ಕೆರೆಗಳಿಗೆ ಹರಿಸುವ ಮೂಲಕ ಸಾವಿರಾರು ರೈತರಿಗೆ ಮತ್ತು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಿನ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಮಲೆನಾಡು ಪ್ರದೇಶದಲ್ಲಿ ಇಂತಹ ಬೃಹತ್ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿರುವುದು ವಿಶೇಷವಾಗಿದೆ. ತಮ್ಮ ಕ್ಷೇತ್ರದಲ್ಲಿ ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿರುವುದಾಗಿ ಹೆಬ್ಬಾರ್ ಹೇಳಿದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಅಥವಾ ಅಪಪ್ರಚಾರ ಮಾಡುವವರು, ತಾವು ಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇತರರನ್ನು ಟೀಕಿಸುವ ಮೊದಲು ತಮ್ಮ ಕಾರ್ಯಗಳ ಕುರಿತು ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹುಳಗೋಡಿನ ಗೋಪಾಲಕೃಷ್ಣ ಭಟ್ ಮಾತನಾಡಿ, ಈ ಭಾಗದಲ್ಲಿ ಬರದ ಪರಿಸ್ಥಿತಿ ಎದುರಾಗುವ ಸಂದರ್ಭದಲ್ಲಿಯೇ ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಯತ್ನದಿಂದ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಭಗೀರಥನಂತೆ ನೀರು ಹರಿಸುವ ಕೆಲಸ ಮಾಡಿರುವ ಅವರ ಕಾರ್ಯಕ್ಕೆ ಪ್ರದೇಶದ ರೈತರು ಕೃತಜ್ಞರಾಗಿರಬೇಕು. ಇದರಿಂದ ಈ ಭಾಗದಲ್ಲಿ ಹಸಿರು ಕ್ರಾಂತಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *