
ಯಲ್ಲಾಪುರ: ರಾಜಕೀಯ ಪ್ರೇರಿತ ಪ್ರಕರಣದಿಂದಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾದ ಪರಿಸ್ಥಿತಿಯಿಂದ ಮೂರನೇ ಅವಧಿಗೆ ಆಡಳಿತ ವಹಿಸಿಕೊಳ್ಳುವುದು ಬರೋಬ್ಬರಿ ಒಂಬತ್ತು ತಿಂಗಳು ವಿಳಂಬವಾದರೂ, ಯಲ್ಲಾಪುರ ತಾಲೂಕು ಮಾರ್ಕೆಟಿಂಗ್ ಸೊಸೈಟಿ (ಟಿಎಂಎಸ್) ಕಳೆದ ಆರ್ಥಿಕ ವರ್ಷದಲ್ಲಿ ₹2.5 ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.
ಸೋಮವಾರ ಟಿಎಂಎಸ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ವಹಿಸಿಕೊಳ್ಳುವಲ್ಲಿ ಉಂಟಾದ ವಿಳಂಬದಿಂದ ಅಡಿಕೆ ಮಾರಾಟದ ಮೇಲೂ ಪರಿಣಾಮ ಬೀರಿದೆ. 52 ಸಾವಿರ ಕ್ವಿಂಟಲ್ ಅಡಿಕೆ ಮಾರಾಟದ ಗುರಿ ಹೊಂದಲಾಗಿತ್ತು. ಆದರೆ ವಿವಿಧ ಅಡೆತಡೆಗಳಿಂದಾಗಿ 48 ಸಾವಿರ ಕ್ವಿಂಟಲ್ ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು ಎಂದರು.

ತಾಲೂಕಿನಲ್ಲಿ ಅಡಿಕೆ ವಿಕ್ರಿಯಲ್ಲಿ ಟಿಎಂಎಸ್ ಮುಂಚೂಣಿಯಲ್ಲಿದ್ದು, ರೈತರ ಹಿತದೃಷ್ಟಿಯಿಂದ ವಿವಿಧ ಸೌಲಭ್ಯ ಹಾಗೂ ರಿಯಾಯಿತಿಗಳನ್ನು ನೀಡಿದ ನಂತರವೂ ಕೋಟ್ಯಂತರ ರೂಪಾಯಿ ಲಾಭ ಗಳಿಸಿರುವುದು ಸಂಸ್ಥೆಯ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಸದಸ್ಯರಿಗೆ ಹಲವು ಸೌಲಭ್ಯ: ಸಂಸ್ಥೆಯ ಶೇರುದಾರರಿಗೆ ಶೇ.15ರಷ್ಟು ಲಾಭಾಂಶ ಘೋಷಿಸಲಾಗಿದೆ. ಸಾಲದ ಬಡ್ಡಿಯಲ್ಲಿ ಶೇ.1ರಷ್ಟು ರಿಯಾಯಿತಿ ನೀಡುವ ಮೂಲಕ ₹11.84 ಲಕ್ಷ, ಅಡಿಕೆ ಮಾರಾಟದ ರಿಬೇಟ್ಗೆ ₹65.24 ಲಕ್ಷ, ಸಾಗಾಣಿಕೆ ವೆಚ್ಚಕ್ಕೆ ₹13.64 ಲಕ್ಷ ಹಾಗೂ ಹಮಾಲಿ ವೆಚ್ಚಕ್ಕೆ ₹4.30 ಲಕ್ಷ ನೀಡಲಾಗಿದೆ. ಸೂಪರ್ ಮಾರ್ಕೆಟ್ ರಿಬೇಟ್ ರೂಪದಲ್ಲಿ ₹4.82 ಲಕ್ಷ ಹಾಗೂ ಸದಸ್ಯರ ಆರೋಗ್ಯ ವಿಮೆಗೆ ₹35.50 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಮುಂಡಗೋಡಿನಲ್ಲಿ ಬೃಹತ್ ಗೋದಾಮು: ಮುಂಡಗೋಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರೈತರಿಗೆ ಅನುಕೂಲವಾಗುವಂತೆ ಬೃಹತ್ ಗೋದಾಮು ನಿರ್ಮಿಸುವ ಚಿಂತನೆ ಇದೆ. ಅಲ್ಲಿಂದ ಅಡಿಕೆಯನ್ನು ಯಲ್ಲಾಪುರಕ್ಕೆ ತಂದು ರೈತರ ಹೆಸರಿನಲ್ಲಿಯೇ ನೇರವಾಗಿ ಮಾರಾಟ ಮಾಡುವ ಯೋಜನೆ ಇದೆ ಎಂದು ಎನ್.ಕೆ. ಭಟ್ಟ ಹೇಳಿದರು.
ಪ್ರಸ್ತುತ ಸಂಸ್ಥೆಯಲ್ಲಿ 1,937 ಸದಸ್ಯರಿದ್ದು, ಸೂಪರ್ ಮಾರ್ಕೆಟ್ ಹಾಗೂ ಪೆಟ್ರೋಲ್ ಪಂಪ್ಗಳ ಗ್ರಾಹಕರ ಕೊಡುಗೆಯೂ ಸಂಸ್ಥೆಯ ಆರ್ಥಿಕ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದರು.
ವಿವಿಧ ವಿಭಾಗಗಳ ವಹಿವಾಟು: ಅಡಿಕೆ ಮಾರಾಟ ₹718.50 ಕೋಟಿ, ಅಡಿಕೆ ದಲಾಲಿ ₹211.60 ಕೋಟಿ, ಪೆಟ್ರೋಲ್ ಪಂಪ್ ₹17.31 ಕೋಟಿ, ಅಡಿಕೆ ಖರೀದಿ ₹14.18 ಕೋಟಿ, ಸೂಪರ್ ಮಾರ್ಕೆಟ್ ₹9.67 ಕೋಟಿ, ಗೊಬ್ಬರ ಮಾರಾಟ ₹5.31 ಕೋಟಿ, ಹಸಿ ಅಡಿಕೆ ವಿಭಾಗ ₹3.87 ಕೋಟಿ ಹಾಗೂ ರೇಷನ್ ವಿಭಾಗ ₹5.48 ಲಕ್ಷ ವಹಿವಾಟು ನಡೆಸಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ವೆಂಕಟ್ರಮಣ ಭಟ್ಟ ಕಿರಕುಂಭ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಹೆಗಡೆ ಉಪಸ್ಥಿತರಿದ್ದರು.















Leave a Reply