ಶೇ.8.5 ಡಿವಿಡೆಂಡ್ ಘೋಷಣೆ; 3 ವರ್ಷಗಳಲ್ಲಿ 100 ಕೋಟಿ ರೂ. ದುಡಿಯುವ ಬಂಡವಾಳದ ಗುರಿ
ಹೊನ್ನಾವರ: ಧರ್ಮಸ್ಥಳದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ 2013ರಲ್ಲಿ ಉದ್ಘಾಟನೆಗೊಂಡಿರುವ ಶ್ರೀ ರಾಮನಾಥ ಪತ್ತಿನ ಸಹಕಾರಿ ಸಂಘವು ಕಳೆದ ವಾರ್ಷಿಕ ಸಾಲಿನಲ್ಲಿ 45.22 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.8.5ರಷ್ಟು ಡಿವಿಡೆಂಡ್ ಘೋಷಿಸಿದ್ದು, ಮುಂದಿನ 3 ವರ್ಷಗಳಲ್ಲಿ ದುಡಿಯುವ ಬಂಡವಾಳವನ್ನು ₹100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ.
ಪಟ್ಟಣದ ಸಂಘದ ಕಚೇರಿಯಲ್ಲಿ ಸೆ.19ರಂದು ನಡೆದ ಸಂಘದ 14ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎನ್.ವಿ. ನಾಯ್ಕ ಹೆರವಟ್ಟಾ ಅವರು, ಸಂಘದ ಪ್ರಗತಿ ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸಂಘವು ಹೊನ್ನಾವರ, ಕುಮಟಾ, ಬಳಕೂರು, ಹಡಿನಬಾಳ ಮತ್ತು ಚಂದಾವರ ಸೇರಿದಂತೆ ಒಟ್ಟು 5 ಶಾಖೆಗಳನ್ನು ಹೊಂದಿದೆ. 5,091 ಶೇರುದಾರ ಸದಸ್ಯರನ್ನು ಒಳಗೊಂಡಿರುವ ಸಂಘವು ₹1.77 ಕೋಟಿ ಶೇರು ಬಂಡವಾಳ ಹಾಗೂ ₹40.34 ಕೋಟಿ ದುಡಿಯುವ ಬಂಡವಾಳದೊಂದಿಗೆ ಮುನ್ನಡೆಯುತ್ತಿದೆ. ₹35.13 ಕೋಟಿ ವಿವಿಧ ಠೇವಣಿಗಳನ್ನು ಸಂಗ್ರಹಿಸಿದ್ದು, ₹4.23 ಕೋಟಿ ಮೊತ್ತವನ್ನು ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡಲಾಗಿದೆ. ಸದಸ್ಯರಿಗೆ ₹36.80 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಪ್ರಮಾಣ ಶೇ.95.52ರಷ್ಟಿದೆ ಎಂದು ತಿಳಿಸಿದರು.
ಸದಸ್ಯರ ಸಹಕಾರ, ಉತ್ಸಾಹಿ ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿ ವರ್ಗದವರ ಸೇವಾ ಮನೋಭಾವದಿಂದ ಸಂಘವು ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು ಸಂಘದ ವ್ಯವಹಾರವನ್ನು ವಿಸ್ತರಿಸುವ ಉದ್ದೇಶವಿದೆ. ಮುಂದಿನ 3 ವರ್ಷಗಳಲ್ಲಿ ದುಡಿಯುವ ಬಂಡವಾಳವನ್ನು ₹100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಚಂದಾವರ ಶಾಖೆಯಲ್ಲಿ ಬಂಗಾರ ಅಡಮಾನ ಸಾಲ ಸೌಲಭ್ಯ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲ ಶಾಖೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸಂಘದ ನಿರ್ದೇಶಕರಾದ ಹೆಚ್.ಆರ್. ನಾಯ್ಕ, ಜಿ.ಜಿ. ನಾಯ್ಕ, ನಾಗೇಶ ನಾಯ್ಕ, ಶ್ರೀಕಾಂತ ನಾಯ್ಕ, ಶಿವಾನಂದ ನಾಯ್ಕ, ವೀಣಾ ನಾಯ್ಕ, ಜಾನಕಿ ನಾಯ್ಕ, ಮಾದೇವಿ ನಾಯ್ಕ, ಮಾಸ್ತಿ ಮುಕ್ರಿ ಹಾಗೂ ಶೇರುದಾರ ಸದಸ್ಯರು ಸೇರಿದಂತೆ ಶಾಖಾ ವ್ಯವಸ್ಥಾಪಕರಾದ ರಾಜೇಶ ನಾಯ್ಕ, ಶ್ರೀಧರ ನಾಯ್ಕ, ಪ್ರಮೋದ ನಾಯ್ಕ, ನಿತಿನ್ ನಾಯ್ಕ, ಸಂದೀಪ ನಾಯ್ಕ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಉಪಾಧ್ಯಕ್ಷ ಸುರೇಶ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಆರ್.ಎಂ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಮಂಜುನಾಥ ನಾಯ್ಕ ಸಂಸ್ಥೆಯ ಪ್ರಗತಿಯ ಚಿತ್ರಣ ನೀಡಿದರು. ನಿರ್ದೇಶಕ ಜೆ.ಎಸ್. ನಾಯ್ಕ ವಂದಿಸಿದರು. ಮುಖ್ಯ ಕಾರ್ಯನಿರ್ವಾಹಕಿ ಭಾರತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.















Leave a Reply