‘ಕಲ್ಲಲ್ಲ, ಚಂಡು ಎಸೆದಿದ್ದಾರೆ; ವಾಪಸ್ ಹೊಡೆಯುತ್ತದೆ’  : ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ  ಹೆಳಿದ್ದು ಯಾರಿಗೆ ?

ಹಂಚಿಕೊಳ್ಳಿ


ಶಿರಸಿ: ರಾಜ್ಯದ ಪ್ರಮುಖ ಅಡಿಕೆ ಬೆಳೆಗಾರರ ಸಂಸ್ಥೆ ದಿ ಟೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್)ಯು ಪ್ರಸಕ್ತ ಸಾಲಿನಲ್ಲಿ 23.68 ಕೋಟಿ ರೂ. ಲಾಭ ಗಳಿಸಿದ್ದು, ದುಡಿಯುವ ಬಂಡವಾಳ 816.48 ಕೋಟಿ ರೂ.ಗೆ ತಲುಪಿದೆ ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.
ಗುರುವಾರ ಟಿಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 103 ವರ್ಷಗಳನ್ನು ಪೂರ್ಣಗೊಳಿಸಿರುವ ಸಂಸ್ಥೆ 104ನೇ ವರ್ಷಕ್ಕೆ ಕಾಲಿಟ್ಟಿದೆ. ಸದಸ್ಯರು ಮತ್ತು ರೈತರ ಸಹಕಾರದಿಂದ ಸಂಸ್ಥೆ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸುತ್ತಿದೆ ಎಂದರು.
ಟಿಎಸ್‌ಎಸ್‌ನಿಂದ ಸದಸ್ಯರಿಗೆ ವಿವಿಧ ಉದ್ದೇಶಗಳಿಗಾಗಿ 359.30 ಕೋಟಿ ರೂ. ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ಒಟ್ಟಾರೆ ವ್ಯವಹಾರ 1,602.75 ಕೋಟಿ ರೂ. ಆಗಿದೆ. ಅಡಿಕೆ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಬರುವ ಅಡಿಕೆಯ ಪ್ರಮಾಣ ಕುಸಿದಿರುವುದು ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
ಸದಸ್ಯರ ಠೇವಣಿ 443.35 ಕೋಟಿ ರೂ. ಆಗಿದೆ. ಇತರ ಹಣಕಾಸು ಸಂಸ್ಥೆಗಳಲ್ಲಿ ಸಂಘ ಹೊಂದಿರುವ ಠೇವಣಿ, ಷೇರು ಹಾಗೂ ಚಾಲ್ತಿ ಖಾತೆಗಳ ಮೊತ್ತ 125.75 ಕೋಟಿ ರೂ. ಇದೆ. ಸಂಘವು ವಿವಿಧ ಬ್ಯಾಂಕ್‌ಗಳಿಂದ ಪಡೆದಿರುವ ಸಾಲ 197.92 ಕೋಟಿ ರೂ. ಆಗಿದೆ.
ಅಡಿಕೆ ಬೆಳೆ ಮೇಲೆ ಎಲೆಚುಕ್ಕೆ ಸೇರಿದಂತೆ ವಿವಿಧ ರೋಗಗಳ ಪರಿಣಾಮ ಬೀರಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಇದರ ಪರಿಣಾಮ ಮಾರುಕಟ್ಟೆಗೆ ಬರುವ ಅಡಿಕೆಯ ಪ್ರಮಾಣವೂ ಕುಸಿದಿದೆ. ಪ್ರಸಕ್ತ ಸಾಲಿನಲ್ಲಿ ಟಿಎಸ್‌ಎಸ್‌ನಲ್ಲಿ 2,13,997 ಕ್ವಿಂಟಾಲ್ ಅಡಿಕೆ ವಿಕ್ರಯವಾಗಿದೆ. ಮಾರುಕಟ್ಟೆಯಲ್ಲಿ ಸಂಘದ ಮೂಲಕ ನಡೆದ ಅಡಿಕೆ ವಿಕ್ರಯದ ಪ್ರಮಾಣ ಶೇ.48.23 ಆಗಿದೆ ಎಂದು ಎಂದರು.
ಸಂಘವು ಪ್ರಸಕ್ತ ಸಾಲಿನಲ್ಲಿ 69,163 ಕ್ವಿಂಟಾಲ್ ಅಡಿಕೆಯನ್ನು 300.43 ಕೋಟಿ ರೂ.ಗೂ ಅಧಿಕ ಮೌಲ್ಯದಲ್ಲಿ, 446 ಕ್ವಿಂಟಾಲ್ ಕಾಳುಮೆಣಸನ್ನು 2.99 ಕೋಟಿ ರೂ.ಗೂ ಅಧಿಕ ಮೌಲ್ಯದಲ್ಲಿ ಹಾಗೂ 3 ಕ್ವಿಂಟಾಲ್ ಏಲಕ್ಕಿಯನ್ನು 5.58 ಲಕ್ಷ ರೂ. ಮೌಲ್ಯದಲ್ಲಿ ಖರೀದಿಸಿದೆ.
ಎಲ್ಲ ಅಡಿಕೆಯನ್ನೂ ಖರೀದಿಸುವ ಸಾಮರ್ಥ್ಯ ಸಂಸ್ಥೆಗೆ ಹಿಂದಿನಷ್ಟಿಲ್ಲ. 103 ವರ್ಷಗಳ ಸಂಸ್ಥೆಯ ಶಕ್ತಿಗೆ ಈಚೆಗೆ ಹಲವು ಕಾರಣಗಳಿಂದ ಮಿತಿ ಬಂದಿದೆ. ಮುಂದಿನ ದಿನಗಳಲ್ಲಿ ಶೇಖರಣಾ ಸಾಮರ್ಥ್ಯವನ್ನೂ ಹೆಚ್ಚಿಸಬೇಕಿದೆ. ಹೊರಗಿನವರು ಉತ್ತಮ ಗುಣಮಟ್ಟದ ಅಡಿಕೆಯನ್ನು ಖರೀದಿಸಿ ಬೇರೆ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡುತ್ತಿರುವುದು ಕೂಡ ಮಾರುಕಟ್ಟೆಯಲ್ಲಿ ಸವಾಲಾಗಿದೆ ಎಂದು ವೈದ್ಯ ಹೇಳಿದರು.
ಅಡಿಕೆಯೊಂದಿಗೆ ಇತರ ಕೃಷಿ ಉತ್ಪನ್ನಗಳ ವ್ಯವಹಾರಕ್ಕೂ ಟಿಎಸ್‌ಎಸ್ ಒತ್ತು ನೀಡಿದೆ. ಪ್ರಸಕ್ತ ಸಾಲಿನಲ್ಲಿ 338 ಕ್ವಿಂಟಾಲ್ ತೆಂಗಿನಕಾಯಿ ಗರಟೆ ವಿಕ್ರಯವಾಗಿದ್ದು, ಅದರ ಮೌಲ್ಯ 6 ಲಕ್ಷ ರೂ. ಎಂದ ಅವರು, ಸದಸ್ಯರಿಗೆ ನೇರ ಹಾಗೂ ಪರೋಕ್ಷವಾಗಿ ನೀಡಲಾದ ಆರ್ಥಿಕ ಸಹಾಯ 9.59 ಕೋಟಿ ರೂ. ಆಗಿದೆ ಎಂದರು.
ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಅಕ್ಟೋಬರ್ 5ರಿಂದ ಬಿ.ಎಸ್ಸಿ. ನರ್ಸಿಂಗ್ ಕಾಲೇಜು ಆರಂಭಿಸಲಾಗುವುದು. ಆಸ್ಪತ್ರೆಯಲ್ಲಿ ಪ್ರಾರ್ಥನಾ ಮಂದಿರವನ್ನೂ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಾರ್ಥನಾ ಮಂದಿರದ ಯೋಜನೆಗೆ ಈಗಾಗಲೇ 2 ಕೋಟಿ ರೂ. ದೇಣಿಗೆ ಬಂದಿದ್ದು, ಒಟ್ಟು ಸುಮಾರು 4.5 ಕೋಟಿ ರೂ. ಅಗತ್ಯವಿದೆ ಎಂದು ಗೋಪಾಲಕೃಷ್ಣ ವೈದ್ಯ ತಿಳಿಸಿದರು.
2018ರಿಂದ 2023ರವರೆಗಿನ ಅವಧಿಗೆ ಸಂಬಂಧಿಸಿದ ಲೆಕ್ಕಪತ್ರಗಳ ಪುನರ್‌ಆಡಿಟ್ ನಡೆಸಲಾಗಿದೆ. ಹಿಂದಿನ ಅವಧಿಗಳಲ್ಲಿ ವಿವಿಧ ಕಾರಣಗಳಿಂದ ಸಂಸ್ಥೆಗೆ ನಷ್ಟ ಉಂಟಾಗಿದ್ದು, ಹಿಂದಿನ ನಷ್ಟದ ಬಾಕಿ ಇಂದಿಗೆ ಸುಮಾರು 76.79 ಕೋಟಿ ರೂ.ಯಷ್ಟಿದೆ . ಸಂಘದ ಲಾಭವನ್ನು ಇದಕ್ಕೆ ಸೇರಿಸಿ ನಷ್ಟ ಬಾಕಿ ಮೊತ್ತ ಕಡಿಮೆ ಮಾಡಲಾಗುತ್ತಿದೆ ಎಂದರು.
ಹಿಂದಿನ ಬಾಕಿ ಮೊತ್ತವನ್ನು ಉಳಿಸಿಕೊಂಡಿರುವ ಕೆಲವರಿಂದ ಸಂಸ್ಥೆಯ ಹಣಕಾಸು ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಬಾಕಿ ವಸೂಲಿಗೆ ಕಾನೂನುಬದ್ಧ ಹಾಗೂ ಸಂಸ್ಥೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಸದಸ್ಯರ ಹಿತಕ್ಕಾಗಿ ಅಗತ್ಯವಿದ್ದರೆ ಯಾವುದೇ ಅಧಿಕರಾಸ್ಥರ, ಜನರ ನಡುವೆ ತೆರಳಲು ಸಿದ್ಧರಿದ್ದೇವೆ ಎಂದು ಹೇಳಿದರು.
ಟಿಎಸ್‌ಎಸ್ ನಿರ್ದೇಶಕರಾದ ರವೀಂದ್ರ ಹೆಗಡೆ ಹಳದೋಟ, ನರಸಿಂಹ ಹೆಗಡೆ ಬಾಳೆಗದ್ದೆ, ದತ್ತಗುರು ಹೆಗಡೆ, ಗಣಪತಿ ಜೋಶಿ ಕೊಪ್ಪಲತೋಟ, ನಿರ್ಮಲಾ ಹೆಗಡೆ, ಪುರುಷೋತ್ತಮ ಹೆಗಡೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗಿರೀಶ ಹೆಗಡೆ ಉಪಸ್ಥಿತರಿದ್ದರು.

‘ಅವರು ಎಸೆದದ್ದು ಕಲ್ಲಲ್ಲ, ಚಂಡು-ವಾಪಸ್ ಹೊಡೆಯುತ್ತದೆ’:
ನಾವು ಸಣ್ಣ ಜನ; ಅವರು ಹಿರಿಯ ಸಹಕಾರಿಗಳು, ರಾಜಕಾರಣಿಗಳು. ಆದರೂ ವಾಸ್ತವಿಕತೆ ಹೇಳಲೇಬೇಕು. 123 ಕೋಟಿ ರೂ. ನಷ್ಟವಿದೆ ಎಂಬ ಆರೋಪದ ಬಗ್ಗೆ ನಮ್ಮಲ್ಲಿ ಉತ್ತರಗಳಿವೆ. ಮೂವರು ದೊಡ್ಡ ಸಾಲಗಾರರಿಂದಲೇ ಸಂಸ್ಥೆಗೆ ನಷ್ಟವಾಗಿದೆ. ಈ ಕುರಿತು ಕಾನೂನು ಕ್ರಮ ಕೈಗೊಂಡಿದ್ದೇವೆ. ಇನ್ನು ಕೆಡಿಸಿಸಿಯಲ್ಲಿ ಸಾಲ ಕೇಳಿದ್ದಕ್ಕೆ ಕೊಡದೇ ಇದ್ದಾಗ ನಾವೇ ಅದರ ಅಧ್ಯಕ್ಷರ ಮನೆಗೆ ಎರಡು ಬಾರಿ ಹೋಗಿದ್ದೇವೆ. ಉಳಿದ‌ವಮೂರ್ನಾಲ್ಕು ನಿರ್ದೇಶಕರು, ಸಿಇಒ ಅವರೂ ಆಡಳಿತ ಮಂಡಳಿ ಸಭೆ ಸಂದರ್ಭದಲ್ಲೂ ಹೋಗಿದ್ದಾರೆ. ಅವರೇಕೆ ಆದರೂ ಹಾಗೆ ಹೇಳಿದರು ಗೊತ್ತಿಲ್ಲ. ಅಂದು ಅವರು ಹೇಳಿದ್ದು ಶುದ್ಧ ಸುಳ್ಳು. ಅವರು ಎಸೆದದ್ದು ಕಲ್ಲಲ್ಲ, ಚಂಡು-ವಾಪಸ್ ಹೊಡೆಯುತ್ತದೆ.
– ಗೋಪಾಲಕೃಷ್ಣ ವೈದ್ಯ, ಟಿಎಸ್‌ಎಸ್ ಅಧ್ಯಕ್ಷ, ಶಿರಸಿ

Leave a Reply

Your email address will not be published. Required fields are marked *