ತಳಿರು-ತೋರಣ, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಶಿರಸಿ ನಗರ | ಗಜಗಾತ್ರದ ಗಣಪತಿ ನಿರ್ಮಾಣದಲ್ಲಿ ಗುಡಿಗಾರರು

ಹಂಚಿಕೊಳ್ಳಿ

ಶಿರಸಿ: ವಿಘ್ನ ನಿವಾರಕ ಶ್ರೀ ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದ್ದು, ಗಣೇಶನನ್ನು ಮನೆ-ಮನಗಳಲ್ಲಿ ಬರಮಾಡಿಕೊಳ್ಳಲು ಶಿರಸಿ ನಗರ ಸಜ್ಜಾಗುತ್ತಿದೆ. ಗಣೇಶೋತ್ಸವದ ಸಂಭ್ರಮಕ್ಕೆ ನಗರದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ತಳಿರು ತೋರಣ ಹಾಗೂ ವಿದ್ಯುತ್ ದೀಪಗಳ ಅಲಂಕಾರದಿಂದ ನಗರ ಕಂಗೊಳಿಸುವಂತೆ ಮಾಡಲಾಗುತ್ತಿದೆ.

ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಸ್ಥಳಗಳಲ್ಲಿಯೂ ವಿಶೇಷ ಸಿದ್ಧತೆ ನಡೆಯುತ್ತಿದೆ. ವಿದ್ಯುತ್ ದೀಪಗಳ ಆಕರ್ಷಕ ಅಲಂಕಾರದಿಂದ ಗಣಪತಿ ಮಂಟಪಗಳು ಮಿರಮಿರನೆ ಹೊಳೆಯುವಂತೆ ಸಜ್ಜುಗೊಳ್ಳುತ್ತಿವೆ. ವಿವಿಧ ಬಗೆಯ ಅಲಂಕಾರ, ಮಂಟಪ ನಿರ್ಮಾಣ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಅಂತಿಮ ಹಂತ ತಲುಪಿದೆ.

ಇನ್ನೊಂದೆಡೆ, ಶಿರಸಿಯ ಹೆಸರಾಂತ ಗುಡಿಗಾರರು ಗಣೇಶ ಮೂರ್ತಿಗಳ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣು ತಂದು ಗಣಪತಿ ಮೂರ್ತಿ ರಚನೆಗೆ ಚಾಲನೆ ನೀಡಿದ್ದ ಗುಡಿಗಾರರು ಇದೀಗ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಶಿರಸಿಯ ಗುಡಿಗಾರಿಕೆ ಖ್ಯಾತಿ

ಗುಡಿಗಾರಿಕೆಯಲ್ಲಿ ಶಿರಸಿಯ ಕಲೆ ರಾಷ್ಟ್ರಮಟ್ಟದಲ್ಲೇ ತನ್ನದೇ ಆದ ಛಾಪು ಮೂಡಿಸಿದೆ. ಇಲ್ಲಿನ ಕಲಾವಿದರು ಮಣ್ಣು ಹಾಗೂ ಕಟ್ಟಿಗೆಯನ್ನು ಬಳಸಿಕೊಂಡು ಗಣಪತಿ ಮೂರ್ತಿಗಳಷ್ಟೇ ಅಲ್ಲದೆ ವಿವಿಧ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳ ದೇವಸ್ಥಾನ, ಮಠ-ಮಂದಿರಗಳ ಅಲಂಕಾರ ಹಾಗೂ ಆಕರ್ಷಣೆಯನ್ನು ಹೆಚ್ಚಿಸುವ ಕಲಾಕೃತಿಗಳನ್ನೂ ಶಿರಸಿಯ ಗುಡಿಗಾರರು ನಿರ್ಮಿಸಿದ್ದಾರೆ.

ಇಂತಹ ಕಲಾ ಪರಂಪರೆಯ ತವರೂರಾದ ಶಿರಸಿಯಲ್ಲಿ ಗಣೇಶೋತ್ಸವಕ್ಕಾಗಿ ಎಂತಹ ಅದ್ದೂರಿ ಮೂರ್ತಿಗಳು ರೂಪುಗೊಳ್ಳಬಹುದು ಎಂಬುದಕ್ಕೆ ಈ ಬಾರಿಯ ಗಣಪತಿ ಮೂರ್ತಿಗಳೇ ಸಾಕ್ಷಿಯಾಗಿವೆ.

ನಗರದ ಗಿರೀಶ ಮಧುಕರ ಗುಡಿಗಾರ, ಪ್ರಶಾಂತ ಗುಡಿಗಾರ, ಸೂರ್ಯಕಾಂತ ಗುಡಿಗಾರ, ಮಾದೇವ ಗುಡಿಗಾರ, ಸುರೇಶ ಗುಡಿಗಾರ ಸೇರಿದಂತೆ ಹಲವು ಗುಡಿಗಾರರು ಗಜಗಾತ್ರದ ಸಾರ್ವಜನಿಕ ಗಣಪತಿ ಮೂರ್ತಿಗಳ ಜತೆಗೆ ಮನೆ ಗಣಪತಿಗಳನ್ನೂ ನಿರ್ಮಿಸುತ್ತಿದ್ದಾರೆ. ಬಹುತೇಕ ಮೂರ್ತಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಹಂತದ ಅಲಂಕಾರ ಹಾಗೂ ಬಣ್ಣದ ಕೆಲಸಗಳು ಭರದಿಂದ ಸಾಗಿವೆ.

ಒಟ್ಟಾರೆ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಶಿರಸಿ ನಗರ ಸಿಂಗಾರಗೊಳ್ಳುತ್ತಿದ್ದು, ಮನೆ-ಮನೆಗಳಲ್ಲೂ, ಸಾರ್ವಜನಿಕ ಗಣಪತಿ ಮಂಟಪಗಳಲ್ಲೂ ವಿಘ್ನ ನಿವಾರಕನ ಆಗಮನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *