
ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಪ್ರಸಕ್ತ ವರ್ಷ 27.35 ಕೋಟಿ ರೂ. ನಿಕ್ಕಿ ಲಾಭ ಗಳಿಸಿದೆ. ಕಳೆದ ವರ್ಷ ಈ ಲಾಭದ ಪ್ರಮಾಣ 25.11 ಕೋಟಿ ರೂ. ಇದ್ದು, ಈ ವರ್ಷ ಶೇ.8.92ರಷ್ಟು ಹೆಚ್ಚಿನ ಪ್ರಗತಿ ಸಾಧಿಸಿದಂತಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ನಗರದ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, 1920ರಲ್ಲಿ ಸ್ಥಾಪನೆಯಾದ ಕೆಡಿಸಿಸಿ ಬ್ಯಾಂಕ್ 106 ವರ್ಷಗಳನ್ನು ಪೂರ್ಣಗೊಳಿಸಿ 107ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿಯ ದಾಪುಗಾಲು ಹಾಕುತ್ತಿದೆ. ಈ ವರ್ಷ ಬ್ಯಾಂಕಿನ ಚುನಾವಣೆ ನಡೆದು ಸತತ ನಾಲ್ಕು ತಿಂಗಳ ಕಾಲ ಆಡಳಿತ ಮಂಡಳಿ ಇಲ್ಲದ ಕಾರಣ ಕೆಲ ಸಮಸ್ಯೆ ಉಂಟಾಗಿತ್ತು. ಹೀಗಾಗಿ ನಮ್ಮ ನಿರೀಕ್ಷೆಯ ಲಾಭ ಸಿಕ್ಕಿಲ್ಲವಾದರೂ ಈ ವರ್ಷದ ಲಾಭ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿದೆ ಎಂದರು.
ಬ್ಯಾಂಕಿನ ಷೇರು ಬಂಡವಾಳ ಕಳೆದ ವರ್ಷ 145.11 ಕೋಟಿ ರೂ. ಇದ್ದುದು ಈ ವರ್ಷ 156.85 ಕೋಟಿ ರೂ.ಗೆ ಏರಿಕೆಯಾಗಿದೆ. ನಿಧಿಗಳು 351.44 ಕೋಟಿ ರೂ.ಗಳಿಂದ 380.60 ಕೋಟಿ ರೂ.ಗೆ ಹಾಗೂ ಠೇವಣಿಗಳು 3569.45 ಕೋಟಿ ರೂ.ಗಳಿಂದ 4191.41 ಕೋಟಿ ರೂ. ಗೆ ಏರಿಕೆಯಾಗಿದ್ದು, ಶೇ.17ರಷ್ಟು ಹೆಚ್ಚಾದಂತಾಗಿದೆ. ಸಾಲ ಬಾಕಿ 3384.85 ಕೋಟಿ ರೂ. ನಷ್ಟಿದ್ದು, ದುಡಿಯುವ ಬಂಡವಾಳ ಶೇ.8.51ರಷ್ಟು ಏರಿಕೆಯಾಗಿ 5348.77 ಕೋಟಿ ರೂ.ಗೆ ತಲುಪಿದೆ ಎಂದರು.
ಬ್ಯಾಂಕಿನ ಎಲ್ಲ 74 ಶಾಖೆಗಳೂ ಗಣಕೀಕರಣಗೊಂಡು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 35694 ರೈತರ 47761 ಎಕರೆ, ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ 47673 ರೈತರ 55353 ಎಕರೆ ಸೇರಿಸಲಾಗಿದೆ. ಅರ್ಹ 138 ಗ್ರಾಹಕರಿಗೆ ಕೃಷಿ ಭೂಮಿ ಖರೀದಿಗಾಗಿ 33.69 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. 152 ವಿದ್ಯಾರ್ಥಿಗಳಿಗೆ 11.64 ಕೋಟಿ ರೂ. ಶೈಕ್ಷಣಿಕ ಸಾಲ, ಔದ್ಯೋಗೀಕರಣ ಸಲುವಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂರಕ್ಷಣಾ ಉದ್ದಿಮೆ ಯೋಜನೆಯಲ್ಲಿ 18 ಘಟಕಗಳಿಗೆ 4.24 ಕೋಟಿ ರೂ. ಸಾಲ ಮಂಜೂರಿ ನೀಡಲಾಗಿದೆ. ಹೈನುಗಾರಿಕೆ ಸಲುವಾಗಿ 1854 ರೈತರಿಗೆ 13.20 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಬ್ಯಾಂಕ್ ಕೇವಲ ಕೃಷಿ ಸಾಲ ನೀಡುವಿಕೆಯನ್ನು ಮಾತ್ರ ಅವಲಂಬಿಸಿಕೊಂಡಿದ್ದರೆ ಲಾಭದಾಯಕವಾಗಿ ಸಾಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕ್ ಉದ್ಯಮಗಳಿಗೆ ಸಾಲ ನೀಡುತ್ತಿದೆಯಾದರೂ ಕೃಷಿಕರ ಅಗತ್ಯ ಪ್ರಮಾಣದ ಸಾಲಕ್ಕೆ ಮತ್ತು ಅವರ ಶ್ರೇಯೋಭಿವೃದ್ಧಿಗೆ ಬದ್ಧವಾಗಿದೆ. ತನ್ನ ಬಂಡವಾಳದಲ್ಲಿ ಶೇ.49ರಷ್ಟು ಕೃಷಿಗೇ ಸಾಲ ನೀಡಿದೆ ಎಂದರು.
ಶಿರಸಿ ಟಿಎಸ್‌ಎಸ್‌ಗೆ ಸಾಲ ನೀಡಿಲ್ಲ ಎಂದು ಅಢಾವೆ ಪತ್ರಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸ್ಥೆ ತನ್ನ ಅಢಾವೆ ಪತ್ರಿಕೆಯಲ್ಲಿ ಹಾನಿಯ ಲೆಕ್ಕಾಚಾರ ತೋರಿಸಿದೆ. ನಿಯಮಗಳ ಪ್ರಕಾರ ಹಾನಿ ಅನುಭವಿಸಿದ ಸಂಸ್ಥೆಗೆ ಸಾಲ ಮಂಜೂರು ಮಾಡಲು ಅವಕಾಶ ಇರುವುದಿಲ್ಲ ಎಂದರು.
ಬ್ಯಾಂಕ್‌ನ ಉಪಾಧ್ಯಕ್ಷ ಕೃಷ್ಣ ದೇಸಾಯಿ, ನಿರ್ದೇಶಕರಾದ ರಾಜಗೋಪಾಲ ಅಡಿ, ಮೋಹನ ನಾಯಕ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಂ.ಎ. ಹೆಗಡೆ, ಆರ್.ಎಂ. ಹೆಗಡೆ ಬಾಳೇಸರ, ತಿಮ್ಮಯ್ಯ ಹೆಗಡೆ, ವ್ಯವಸ್ಥಾಪಕ ಶ್ರೀಕಾಂತ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಕೆಡಿಸಿಸಿ ಬ್ಯಾಂಕ್ ಅಡಿಯಲ್ಲಿರುವ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಲ್ಲಿ ಕೆಲ ವ್ಯವಹಾರದ ಗೊಂದಲಗಳಿಂದಾಗಿ ಕಳೆದ ವರ್ಷದಿಂದ ಲೆಕ್ಕ ಪರಿಶೋಧನೆ ಆರಂಭಿಸಿದ್ದೆವು. ಚಾರ್ಟರ್ಡ್ ಅಕೌಂಟೆಂಟ್ ಅವರ ಸಹಾಯ ಪಡೆದು ಜಿಲ್ಲೆಯ 121 ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಲೆಕ್ಕ ಪರಿಶೋಧನೆ ನಡೆಸಿದ್ದೇವೆ. ಇವುಗಳಲ್ಲಿ 24 ಸಹಕಾರಿ ಸಂಘಗಳ ಲೆಕ್ಕದಲ್ಲಿ ಕೆಲ ಗೊಂದಲಗಳಿರುವ ಕಾರಣ ಆಯಾ ಸಂಘದ ಕಾರ್ಯದರ್ಶಿ, ಅಧ್ಯಕ್ಷರನ್ನೂ ಕರೆದು ಸುಧಾರಣೆಗೆ ಸಲಹೆ ಸೂಚನೆ ನೀಡಿದ್ದೇವೆ. ಆಯಾ ಸಹಕಾರಿ ಸಂಘಗಳೇ ತಮ್ಮ ದೋಷವನ್ನು ಸರಿಪಡಿಸಿಕೊಳ್ಳಬೇಕೇ ಹೊರತು ಕೆಡಿಸಿಸಿ ಬ್ಯಾಂಕ್‌ಗೆ ಈ ಸಹಕಾರಿ ಸಂಘಗಳಲ್ಲಿ ನೇರ ಭಾಗಿಯಾಗಲು ಅವಕಾಶ ಇರುವುದಿಲ್ಲ. ಸೆ.21ರಂದು ಬ್ಯಾಂಕಿನ ಸರ್ವಸಾಧಾರಣ ಸಭೆ ಆಯೋಜಿಸಲಾಗಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬ್ಯಾಂಕಿನ ಪ್ರಗತಿಗೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.















Leave a Reply