ಹಬ್ಬದ ಸಂಭ್ರಮಕ್ಕೆ ಸಂಘದ ಸಾಥ್: ಮನೆ ಬಾಗಿಲಿಗೇ ಗಣಪತಿ ಮೂರ್ತಿ

ಹಂಚಿಕೊಳ್ಳಿ

ಶಿರಸಿ: ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಗ್ರಾಮೀಣ ಭಾಗದ ಗ್ರಾಹಕ ಸದಸ್ಯರ ಅನುಕೂಲಕ್ಕಾಗಿ ತಾಲೂಕಿನ ಮುಂಡಗನಮನೆ ಸೇವಾ ಸಹಕಾರಿ ಸಂಘವು ವಿಶಿಷ್ಟ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಸಂಘದ ಗ್ರಾಹಕ ಸದಸ್ಯರು ಆಯ್ಕೆ ಮಾಡಿಕೊಂಡ ಗಣೇಶ ಮೂರ್ತಿಗಳನ್ನು ಮನೆ ಬಾಗಿಲಿಗೇ ತಲುಪಿಸುವ ಮೂಲಕ ಹಬ್ಬದ ಸಿದ್ಧತೆಯಲ್ಲಿ ತನ್ನದೇ ಆದ ರೀತಿಯಲ್ಲಿ ಕೈಜೋಡಿಸುತ್ತಿದೆ.
ಮತ್ತಿಘಟ್ಟಾ-ಮುಂಡಗನಮನೆ ಸೇವಾ ಸಹಕಾರಿ ಸಂಘವು 1985ರಿಂದಲೂ ಈ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆರಂಭದಲ್ಲಿ ಪ್ರಾರಂಭಿಸಿದ ಈ ಪದ್ಧತಿಯನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದ್ದು, ಇದು ಸಂಘದ ಹಿಂದಿನ ಸಂಪ್ರದಾಯದ ಜತೆಗೆ ಸದಸ್ಯರೊಂದಿಗಿನ ಆತ್ಮೀಯ ಸಂಬಂಧಕ್ಕೂ ಸಾಕ್ಷಿಯಾಗಿದೆ.
ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಸಂಘದ ವತಿಯಿಂದ ಸುಮಾರು 22 ಗಣೇಶ ಮೂರ್ತಿಗಳನ್ನು ಗ್ರಾಹಕ ಸದಸ್ಯರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಗಣೇಶ ಮೂರ್ತಿಗಳನ್ನು ಸಾಗಿಸಲು ಯಾವುದೇ ಬಾಡಿಗೆ ಅಥವಾ ಶುಲ್ಕವನ್ನು ಸದಸ್ಯರಿಂದ ಪಡೆಯದೆ, ಸಂಪೂರ್ಣ ಉಚಿತವಾಗಿ ಈ ಸೇವೆ ಒದಗಿಸಲಾಗುತ್ತಿದೆ.
ಗಣೇಶ ಮೂರ್ತಿಗಳನ್ನು ಸುರಕ್ಷಿತವಾಗಿ ವಾಹನದಲ್ಲಿ ಸಾಗಿಸಿ, ಸದಸ್ಯರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಂಘದ ವತಿಯಿಂದ ಮಾಡಲಾಗುತ್ತದೆ. ಹೀಗಾಗಿ ದೂರದ ಊರುಗಳಿಂದ ಗಣೇಶ ಮೂರ್ತಿಗಳನ್ನು ತರಬೇಕಾದ ತೊಂದರೆಯಿಂದ ಸದಸ್ಯರಿಗೆ ಮುಕ್ತಿ ದೊರೆಯುತ್ತಿದೆ.
ಸೊಸೈಟಿ ವತಿಯಿಂದ 1985ರಿಂದಲೂ ಈ ಸೇವೆಯನ್ನು ಗ್ರಾಹಕ ಸದಸ್ಯರಿಗೆ ನೀಡುತ್ತಿದ್ದೇವೆ. ಹಿಂದಿನ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಪ್ರತಿವರ್ಷವೂ ಸುಮಾರು 22 ಗಣಪತಿ ಮೂರ್ತಿಗಳನ್ನು ಸದಸ್ಯರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಮೂರ್ತಿಗಳನ್ನು ತಲುಪಿಸುವ ಬಾಡಿಗೆ ಸಂಪೂರ್ಣ ಉಚಿತವಾಗಿದೆ” ಎಂದು ವಿ.ಆರ್. ಹೆಗಡೆ ಮತ್ತಿಘಟ್ಟಾ ತಿಳಿಸಿದರು.

Leave a Reply

Your email address will not be published. Required fields are marked *