ಜವಾಬ್ದಾರಿ ಸ್ಥಾನದಲ್ಲಿರುವ ಜನರು ಜವಾಬ್ದಾರಿಯಿಂದ ಮಾತನಾಡಬೇಕು ಹೆಬ್ಬಾರ್ : ಶಾಸಕ ಹೆಬ್ಬಾರ್ ಟಾಂಗ್ ನೀಡಿದ್ದು ಯಾರಿಗೆ ? !! 

ಹಂಚಿಕೊಳ್ಳಿ

ಶಿರಸಿ: ಕಸ್ತೂರಿ ರಂಗನ್‌ ಕುರಿತು ಸೆ.21, 22 ಹಾಗೂ 23ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಮಾತನಾಡಲು ಅವಕಾಶ ನೀಡಿದ್ದಾರೆ. ಕಸ್ತೂರಿ ರಂಗನ್‌ ವರದಿ ನಮ್ಮ ಜಿಲ್ಲೆಯ ಜನರ ಬದುಕನ್ನು ಸಂಪೂರ್ಣ ನಾಶದತ್ತ ಕೊಂಡೊಯ್ಯುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಆರು ಬಾರಿ ವರದಿಯನ್ನು ತಿರಸ್ಕರಿಸಿದೆ. ಇದೀಗ 7 ಬಾರಿ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಒತ್ತಾಯಿಸುತ್ತಿದೆ. ನಮ್ಮ ತಲೆ ಮೇಲೆ ಕಸ್ತೂರಿ ರಂಗನ್‌ ವರದಿ ಹೇರಿಕೆ ಮಾಡುವ ಅಗತ್ಯವೇನಿದೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ಸ್ಪಷ್ಟಪಡಿಸಿದರು.

ಅವರು ಶನಿವಾರ ಮಾಧ್ಯಮದವರ ಜತೆ ಮಾತನಾಡಿ, ಕಸ್ತೂರಿ ರಂಗನ್‌ ವರದಿಯನ್ನು ಯಾರು ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಗ್ರಾಪಂಗಳಿಗೆ ಭೇಟಿ ನೀಡಿ, ಜನಸಾಮಾನ್ಯರ ಜತೆ ಸಾಧಕ-ಬಾಧಕಗಳ ಕುರಿತು ಚರ್ಚಿಸದೇ ಏಳನೇ ಬಾರಿಗೆ ನಮ್ಮ ತಲೆ ಮೇಲೆ ವರದಿಯನ್ನು ಹೇರಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಎಲ್ಲ ಪಕ್ಷಗಳ ಶಾಸಕರು ಒಟ್ಟಾಗಿ, ಪಕ್ಷಾತೀತವಾಗಿ ಈ ವಿಷಯವನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸುತ್ತೇವೆ ಎಂದರು.
ನದಿ ಜೋಡಣೆ ಕೇವಲ ರಾಜ್ಯ ಸರ್ಕಾರದ ಯೋಜನೆಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಇದರಲ್ಲಿ ಜವಾಬ್ದಾರಿ ಇದೆ. ಯೋಜನೆಯನ್ನು ಕೈಬಿಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಎಲ್ಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದೇವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೂ ವಿನಂತಿ ಮಾಡಿದ್ದೇವೆ ಎಂದರು.
ಪಂಚಾಯತ್‌ ರಾಜ್‌ ಇಲಾಖೆಯ ಸುತ್ತೋಲೆಯಿಂದ ಜಿಲ್ಲೆಯ ಅರಣ್ಯವಾಸಿಗಳಿಗೆ ಹಾಗೂ ಗಾಂವಠಾಣ ಜಾಗದಲ್ಲಿ ವಾಸಿಸುವ ಜನರಿಗೆ ಪೆಟ್ಟು ಬೀಳುತ್ತದೆ. ಈ ಕುರಿತು ಸಚಿವ ಈಶ್ವರ ಖಂಡ್ರೆ ಅವರನ್ನು ನಾನು ಹಾಗೂ ಶಾಸಕ ಭೀಮಣ್ಣ ನಾಯ್ಕ ಭೇಟಿಯಾಗಿ ಸುತ್ತೋಲೆಯನ್ನು ವಾಪಸ್‌ ಪಡೆಯುವಂತೆ ವಿನಂತಿ ಮಾಡಿದ್ದೇವೆ. ಸೆ.21, 22, 23ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಭೆ ಕರೆದು ಅಧಿಕಾರಿಗಳ ಜತೆ ಚರ್ಚಿಸಿ ತಾರ್ಕಿಕ ಅಂತ್ಯ ಹಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ನಾಡಿನ ಬಡವರ ರಕ್ಷಣೆ ಮಾಡುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರದ ಧ್ಯೇಯವಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ಕೆ.ರಾಜಣ್ಣ ಅವರನ್ನು ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ಮಾಡಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗೂ ಸಹಕಾರಿ ಸಚಿವರು ಎರಡುವರೆ ತಾಸು ಎಲ್ಲ ಸದಸ್ಯರ ಜತೆ ಸುದೀರ್ಘ ಚರ್ಚೆ ನಡೆಸಿ, ಸ್ನೇಹಿತ ರವಿಯನ್ನು ಅಧ್ಯಕ್ಷರನ್ನಾಗಿ ಹಾಗೂ ರಾಯಚೂರಿನ ಬಯ್ಯಪ್ಪ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಇದನ್ನು ಅಭಿಮಾನ ಹಾಗೂ ಗರ್ವದಿಂದ ಒಪ್ಪಿಕೊಂಡಿದ್ದೇವೆ. ಅಪೆಕ್ಸ್‌ ಬ್ಯಾಂಕ್‌ ರಾಜ್ಯದ ರೈತರ ರಕ್ಷಣೆಗೆ ಕೆಲಸ ಮಾಡಬೇಕು. ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ತಂದೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಪೆಕ್ಸ್‌ ಬ್ಯಾಂಕ್‌ 39 ಲಕ್ಷ ರೈತರಿಗೆ ಸಾಲ ನೀಡುತ್ತಿದೆ. ಈ ಕಾರಣಕ್ಕಾಗಿ ಬ್ಯಾಂಕ್‌ನ್ನು ರಾಜಕೀಯಕರಣಗೊಳಿಸಬಾರದು. ಇತಿಹಾಸದಲ್ಲಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಸರ್ವಸಮ್ಮತವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಅದೇ ಇತಿಹಾಸವನ್ನು ಮುಂದುವರಿಸಿಕೊಂಡು ಹೋಗಿದ್ದೇವೆ. ರವಿ ಅವರ ನೇತೃತ್ವದಲ್ಲಿ ಬ್ಯಾಂಕ್‌ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸವಿದೆ ಎಂದರು.


ಕಸ್ತೂರಿ ರಂಗನ್‌ ವರದಿ ಜಾರಿ ಸಾಧ್ಯವಿಲ್ಲ:
ನಮ್ಮ ಜಿಲ್ಲೆಯ ಪರಿಸರ ರಕ್ಷಣೆ ಮಾಡಲು ಕಸ್ತೂರಿ ರಂಗನ್‌ ವರದಿ ನಮಗೆ ಅವಶ್ಯಕತೆಯಿಲ್ಲ. ಶೇ.86ರಷ್ಟು ಅರಣ್ಯವನ್ನು ಉಳಿಸಿಕೊಂಡು ಬಂದಿದ್ದೇವೆ. ಇದರಿಂದ ನಮಗೆ ಪಾಠ ಕಲಿಸುವ ಅವಶ್ಯಕತೆಯಿಲ್ಲ. ಸರ್ವಾನುಮತದಿಂದ ಸಚಿವ ಸಂಪುಟದಲ್ಲಿ ತಿರಸ್ಕಾರ ಮಾಡಿದರೂ ಕಸ್ತೂರಿ ರಂಗನ್‌ ಕುರಿತು ಜವಾಬ್ದಾರಿ ಸ್ಥಾನದಲ್ಲಿರುವ ಕೆಲವರು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಜನರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಂಸದ ಕಾಗೇರಿಗೆ ಶಾಸಕ ಶಿವರಾಮ ಹೆಬ್ಬಾರ ಟಾಂಗ್‌ ನೀಡಿದರು.


ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನದಿ ಜೋಡಣೆ ವಿರೋಧಿ ಹೋರಾಟಕ್ಕೆ ಧುಮುಕಿದ್ದೇವೆ. ಅವರ ನಾಯಕತ್ವಕ್ಕೆ ಯಾವುದೇ ರಾಜಕೀಯ ಲೇಪನ ಬಡಿಯದೇ, ಅವರು ನೀಡುವ ನಿರ್ದೇಶನವನ್ನು ನಾವೆಲ್ಲರೂ ಪಾಲಿಸಲು ಸಿದ್ಧರಿದ್ದೇವೆ. ಪಕ್ಷವನ್ನೂ ಮೀರಿ ಜಿಲ್ಲೆಯ ಮೇಲೆ ಹೇರಲು ಹೊರಟಿರುವ ಮಾರಕ ಯೋಜನೆಯನ್ನು ತಡೆಯುತ್ತೇವೆ.
ಶಿವರಾಮ ಹೆಬ್ಬಾರ, ಶಾಸಕ

Leave a Reply

Your email address will not be published. Required fields are marked *