ಶಿವಗಂಗಾ ಫಾಲ್ಸ್‌ಗೆ 46.45 ಲಕ್ಷ ರೂ. ಧಾರೆ; ಅಭಿವೃದ್ಧಿ ಮಾತ್ರ ಬರೆ!

ಹಂಚಿಕೊಳ್ಳಿ

ಶಿರಸಿ: ತಾಲೂಕಿನ ಗಣೇಶಪಾಲ್ ಸಮೀಪದ ಶಾಲ್ಮಲಾ ನದಿಯ ಶಿವಗಂಗಾ ಫಾಲ್ಸ್ ಅಭಿವೃದ್ಧಿಗೆ ಲಕ್ಷಾಂತರ ರೂ. ಅನುದಾನ ಮಂಜೂರಾಗಿ ವರ್ಷಗಳೇ ಕಳೆದರೂ, ಪ್ರವಾಸಿ ತಾಣದ ಸಮಗ್ರ ಅಭಿವೃದ್ಧಿ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಹಾಲಿ ಶಾಸಕ ಆರ್‌.ವಿ. ದೇಶಪಾಂಡೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಯ ಭಾಗವಾಗಿ ತಾಲೂಕಿನ ಹಿತ್ಲಳ್ಳಿ ಗ್ರಾಮದ ವ್ಯಾಪ್ತಿಯ ಶಿವಗಂಗಾ ಫಾಲ್ಸ್‌ನಲ್ಲಿ ಮೂಲಸೌಕರ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯ 2014-15ನೇ ಸಾಲಿನ ಬಂಡವಾಳ ವೆಚ್ಚ ಯೋಜನೆಯಡಿ 46.45 ಲಕ್ಷ ರೂ. ಮಂಜೂರಾಗಿತ್ತು. 2021ರಲ್ಲಿ ಇದಕ್ಕೆ ಆಡಳಿತಾತ್ಮಕ ಅನುಮೋದನೆಯೂ ದೊರೆತಿತ್ತು.

ಆದರೆ, ಅನುಮೋದನೆ ದೊರೆತು ಹಲವು ವರ್ಷಗಳು ಕಳೆದರೂ ಯೋಜನೆಯ ಉದ್ದೇಶ ಸಂಪೂರ್ಣವಾಗಿ ಈಡೇರಿಲ್ಲ. ಪ್ರವಾಸಿಗರಿಗೆ ಅಗತ್ಯ ಸುರಕ್ಷತಾ ವ್ಯವಸ್ಥೆ, ಮೂಲಸೌಕರ್ಯ ಹಾಗೂ ಸೂಕ್ತ ನಿರ್ವಹಣೆ ಇಲ್ಲದೆ ತಾಣದ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.

ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ ಅಡಿಯಲ್ಲಿ ಸುರಕ್ಷಿತ ಮೆಟ್ಟಿಲು ಹಾಗೂ ಹ್ಯಾಂಡ್‌ರೈಲ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎನ್ನಲಾಗುತ್ತಿದ್ದರೂ, ಸುರಕ್ಷತಾ ತಡೆಗೋಡೆ, ವೀಕ್ಷಣಾ ಸ್ಥಳ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು, ಸೌಂದರ್ಯೀಕರಣ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ನಿರ್ಮಿಸಲಾಗಿರುವ ಕೆಲವು ಸೌಲಭ್ಯಗಳೂ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿವೆ.

ಮೆಟ್ಟಿಲುಗಳಲ್ಲೇ ಬಿರುಕು; ಮಂಟಪವೂ ಶಿಥಿಲ:

ಶಿವಗಂಗಾ ಫಾಲ್ಸ್‌ಗೆ ನಿರ್ಮಿಸಲಾಗಿರುವ ಮೆಟ್ಟಿಲುಗಳಲ್ಲಿ ಕೆಲವೆಡೆ ಬಿರುಕು ಕಾಣಿಸಿಕೊಂಡಿದ್ದು, ಕಾಂಕ್ರೀಟ್ ಕಿತ್ತುಹೋಗಿದೆ. ಹ್ಯಾಂಡ್‌ರೈಲ್‌ಗಳಿಗೆ ತುಕ್ಕು ಹಿಡಿದಿದೆ. ಪ್ರವಾಸಿಗರಿಗಾಗಿ ನಿರ್ಮಿಸಿರುವ ವೀಕ್ಷಣಾ ಮಂಟಪದ ಮೇಲ್ಛಾವಣಿ ಹಾಳಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮಾಹಿತಿ ಫಲಕ ನೆಲಕ್ಕೆ ಬಿದ್ದಿದೆ.

ಪ್ರವಾಸಿಗರು ಕುಳಿತುಕೊಳ್ಳಲು ನಿರ್ಮಿಸಿರುವ ಬೆಂಚ್‌ಗಳೂ ಹಾಳಾಗಿವೆ. ಮಳೆಗಾಲದಲ್ಲಿ ಮೆಟ್ಟಿಲುಗಳ ಮೇಲೆ ಮಣ್ಣು ಹಾಗೂ ಒಣ ಎಲೆಗಳು ಸಂಗ್ರಹವಾಗುವುದರಿಂದ ಜಾರುವ ಅಪಾಯ ಎದುರಾಗಿದೆ. ವಾಹನ ನಿಲುಗಡೆ ಪ್ರದೇಶವೂ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಪ್ರವಾಸಿಗರ ಸುರಕ್ಷತೆ ಹಾಗೂ ಅನುಕೂಲತೆ ಎರಡೂ ಪ್ರಶ್ನಾರ್ಹವಾಗಿವೆ.

ಮಳೆಗಾಲದಲ್ಲಿ ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಪ್ರವಾಸಿಗರು ಶಿವಗಂಗಾ ಫಾಲ್ಸ್‌ಗೆ ಆಗಮಿಸುತ್ತಾರೆ. ಆದರೆ ಸೂಕ್ತ ಭದ್ರತಾ ಕ್ರಮಗಳ ಕೊರತೆಯಿಂದ ಅಪಾಯದ ಸಾಧ್ಯತೆ ಹೆಚ್ಚಿದೆ. ಕೆಲ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಮಳೆಗಾಲದಲ್ಲಿ ಅಪಾಯಕಾರಿ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸುವ ಸೂಚನಾ ಫಲಕ ಅಳವಡಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಅನುದಾನವೆಷ್ಟು ಖರ್ಚು? ಲೆಕ್ಕ ಎಲ್ಲಿದೆ?

46.45 ಲಕ್ಷ ರೂ. ಅನುದಾನದಲ್ಲಿ ಈವರೆಗೆ ಎಷ್ಟು ಮೊತ್ತ ಖರ್ಚಾಗಿದೆ? ಯಾವ ಕಾಮಗಾರಿಗೆ ಎಷ್ಟು ಹಣ ಬಳಕೆಯಾಗಿದೆ? ಉಳಿದ ಕಾಮಗಾರಿಗಳು ಏಕೆ ಪೂರ್ಣಗೊಂಡಿಲ್ಲ? ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲಾಗಿದೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಮಂಜೂರಾದ ಅನುದಾನದ ಸಂಪೂರ್ಣ ಬಳಕೆ ಹಾಗೂ ಕಾಮಗಾರಿಗಳ ಪ್ರಸ್ತುತ ಸ್ಥಿತಿಯ ಕುರಿತು ಸಂಬಂಧಿಸಿದ ಇಲಾಖೆಗಳು ಸ್ಪಷ್ಟ ಮಾಹಿತಿ ನೀಡಬೇಕು. ಕಾಮಗಾರಿಯ ಗುಣಮಟ್ಟ, ಅನುದಾನದ ಬಳಕೆ ಹಾಗೂ ಅಪೂರ್ಣ ಕಾಮಗಾರಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಲೋಪ ಕಂಡುಬಂದಲ್ಲಿ ಜವಾಬ್ದಾರಿ ನಿಗದಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಿವಗಂಗಾ ಫಾಲ್ಸ್ ಅನ್ನು ಸುರಕ್ಷಿತ, ಸುಸಜ್ಜಿತ ಹಾಗೂ ಆಕರ್ಷಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಬಾಕಿ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ, ಈಗಾಗಲೇ ನಿರ್ಮಿಸಿರುವ ಸೌಲಭ್ಯಗಳ ದುರಸ್ತಿ ಹಾಗೂ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಅನುದಾನಕ್ಕೆ ಲೆಕ್ಕ ಎಲ್ಲಿದೆ?

* 46.45 ಲಕ್ಷ ರೂ. ಅನುದಾನದಲ್ಲಿ ಈವರೆಗೆ ಎಷ್ಟು ಖರ್ಚು?

* ಬಾಕಿ ಕಾಮಗಾರಿಗಳು ವರ್ಷಗಳಾದರೂ ಏಕೆ ಪೂರ್ಣವಾಗಿಲ್ಲ?

* ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆದಿದೆಯೇ?

* ಪ್ರವಾಸಿಗರ ಸುರಕ್ಷತೆಗೆ ಶಾಶ್ವತ ಕ್ರಮ ಯಾವಾಗ?

* ಅಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಹೊಣೆ ಯಾರದ್ದು?

ಬೋಗಸ್‌ ಕಾಮಗಾರಿಗೆ ಯಾರು ಹೊಣೆ?:

ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅನುದಾನ ಮಂಜೂರು ಮಾಡಿ, ಬೋಗಸ್‌ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅರ್ಧಂಬರ್ಧ ಕಾಮಗಾರಿ ನಡೆಸಿ ಕೈತೊಳೆದುಕೊಂಡಿರುವ ಆರೋಪ ಕೇಳಿಬರುತ್ತಿದೆ. ಇದರಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಪ್ರವಾಸಿಗರು ಆಗಮಿಸಿದರೂ ಜಲಪಾತ ವೀಕ್ಷಿಸಲು ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ.

ವಾಹನ ನಿಲುಗಡೆಗೆ ಅಗತ್ಯವಿರುವ ಸ್ಥಳವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವ ಬದಲು ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗಿದೆ. ಸಿಮೆಂಟ್ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಭರ್ತಿ ಮಾಡದ ಕಾರಣ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಒಟ್ಟಾರೆ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸಿರುವುದು ಕಂಡುಬರುತ್ತಿದ್ದು, ಈ ಬೋಗಸ್‌ ಕಾಮಗಾರಿಗೆ ಯಾರು ಹೊಣೆ? ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಕೊಡ್ನಗದ್ದೆ ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ ಹೆಗಡೆ ಮಣ್ಮನೆ ಪ್ರಶ್ನಿಸಿದ್ದಾರೆ.

ಶಿವಗಂಗಾ ಫಾಲ್ಸ್ ಅಭಿವೃದ್ಧಿ ಯೋಜನೆಗೆ ಮಂಜೂರಾದ ಅನುದಾನದ ಸಮಗ್ರ ಲೆಕ್ಕವನ್ನು ಬಹಿರಂಗಪಡಿಸಿ, ಅಪೂರ್ಣ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು.

ಪ್ರವೀಣ ಹೆಗಡೆ ಮಣ್ಮನೆ, ಕೊಡ್ನಗದ್ದೆ ಗ್ರಾಪಂ ಮಾಜಿ ಅಧ್ಯಕ್ಷ

Leave a Reply

Your email address will not be published. Required fields are marked *