ಶಿರಸಿ: ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿನ ಭೂಮಿ ಹಾಗೂ ಆಸ್ತಿ ದಾಖಲೆಗಳ ವೈಶಿಷ್ಟ್ಯವನ್ನು ಪರಿಗಣಿಸದೆ ಇ-ಸ್ವತ್ತು ಕುರಿತು ಹೊರಡಿಸಿರುವ ಹೊಸ ಆದೇಶವನ್ನು ಜಾರಿಗೊಳಿಸಿದರೆ, ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಈ ಭಾಗದ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆದೇಶವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಭೂಮಿ ಮತ್ತು ಮನೆಗಳ ದಾಖಲೆಗಳ ಸ್ವರೂಪ ಸಮತಟ್ಟಾದ ಪ್ರದೇಶಗಳಿಗಿಂತ ಭಿನ್ನವಾಗಿದೆ. ಅನೇಕ ಕುಟುಂಬಗಳು ಹಲವು ದಶಕಗಳಿಂದ ಒಂದೇ ಜಾಗದಲ್ಲಿ ವಾಸಿಸುತ್ತಿದ್ದು, ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿವೆ. ಇಂತಹ ಕುಟುಂಬಗಳನ್ನು ಹೊಸ ಆದೇಶದ ವ್ಯಾಪ್ತಿಯಲ್ಲಿ ಏಕಾಏಕಿ ಸಂಕಷ್ಟಕ್ಕೆ ಸಿಲುಕಿಸುವುದು ಸರಿಯಲ್ಲ ಎಂದರು.
ಅತಿಕ್ರಮಿತ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೂ ಈ ಆದೇಶದ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ತೆರಿಗೆ ಸ್ವೀಕರಿಸುವುದನ್ನು ನಿಲ್ಲಿಸುವುದು, ಅಸ್ತಿತ್ವದಲ್ಲಿರುವ ಮನೆ ಸಂಖ್ಯೆಯನ್ನು ರದ್ದುಪಡಿಸುವುದು ಅಥವಾ ಇ-ಸ್ವತ್ತು ದಾಖಲೆಯನ್ನು ಅಮಾನ್ಯಗೊಳಿಸುವಂತಹ ಕ್ರಮಗಳು ಜನರಲ್ಲಿ ಆತಂಕಕ್ಕೆ ಕಾರಣವಾಗಬಹುದು. ಆದ್ದರಿಂದ ಈಗಿರುವ ವ್ಯವಸ್ಥೆಯನ್ನು ಮುಂದುವರಿಸಿ, ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಹೊಸ ಆದೇಶದ ಕುರಿತು ಮಲೆನಾಡು ಭಾಗದಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಜನರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಮಲೆನಾಡು ಹಾಗೂ ಕರಾವಳಿಯ ವಾಸ್ತವ ಪರಿಸ್ಥಿತಿಯನ್ನು ವಿವರಿಸಿ, ಸ್ಥಳೀಯ ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಆಡಳಿತಾತ್ಮಕ ನಿಯಮಗಳು ಜನರ ಬದುಕಿಗೆ ನೆರವಾಗಬೇಕೇ ಹೊರತು, ಹಲವು ವರ್ಷಗಳಿಂದ ಮನೆ-ಆಸ್ತಿ ಹೊಂದಿ ಬದುಕು ಕಟ್ಟಿಕೊಂಡಿರುವ ಬಡವರು ಮತ್ತು ಸಾಮಾನ್ಯ ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಬಾರದು. ಸರ್ಕಾರ ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.
ಮಲೆನಾಡು ಮತ್ತು ಕರಾವಳಿ ಭಾಗಕ್ಕೆ ಅನ್ವಯವಾಗುವಂತೆ ಅಲ್ಲಿನ ಭೌಗೋಳಿಕ ಹಾಗೂ ಸಾಮಾಜಿಕ ವಾಸ್ತವಾಂಶಗಳನ್ನು ಪರಿಗಣಿಸಿ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ, ಜನರಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.















Leave a Reply