
ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ಪಷ್ಟ ನಿಲುವು ಇಲ್ಲದೆ ಜನವಿರೋಧಿ ಆದೇಶಗಳನ್ನು ಹೊರಡಿಸಿ, ವಿರೋಧ ವ್ಯಕ್ತವಾದ ಬಳಿಕ ಅವುಗಳನ್ನು ಹಿಂಪಡೆಯುವ ಮೂಲಕ ತುಘಲಕ್ ಸರ್ಕಾರದಂತೆ ವರ್ತಿಸುತ್ತಿದೆ.
-ಸದಾನಂದ ಭಟ್ಟ ನಿಡಗೋಡ, ಬಿಜೆಪಿ ಜಿಲ್ಲಾ ವಕ್ತಾರ
ಶಿರಸಿ: ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ, ಅರಣ್ಯ ಹಾಗೂ ಸರ್ಕಾರದ ಒಡೆತನ ಮತ್ತು ನಿಯಂತ್ರಣದಲ್ಲಿರುವ ಜಾಗಗಳಲ್ಲಿ ವಸತಿ ಉದ್ದೇಶಕ್ಕಾಗಿ ನೀಡಲಾಗಿರುವ ಗ್ರಾಮಠಾಣ, ಮನೆ ನಂಬರ್ಗಳನ್ನು ರದ್ದುಗೊಳಿಸಿ ತೆರಿಗೆ ಆಕರಣೆ ಮಾಡಬಾರದು ಎಂಬ ನಿರ್ಧಾರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿರುವುದು ಜನವಿರೋಧಿ ನೀತಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಆರೋಪಿಸಿದರು.
ಅವರು ಸೋಮವಾರ ನಗರದ ದೀನದಯಾಳ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಅತಿಕ್ರಮಣದಲ್ಲಿರುವ ಮನೆಗಳಿಗೆ ಮನೆ ನಂಬರ್ ದೊರೆತಿರುವುದು ಅಲ್ಲಿನ ನಿವಾಸಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರವಾಗಿದೆ. ಮನೆ ನಂಬರ್ ಹಾಗೂ ಇತರ ದಾಖಲೆಗಳನ್ನು ರದ್ದುಗೊಳಿಸಿದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಆಸ್ತಿ ನೋಂದಣಿ ಸೇರಿದಂತೆ ಹಲವು ಮೂಲಭೂತ ಹಕ್ಕುಗಳಿಂದ ಜನರು ವಂಚಿತರಾಗುತ್ತಾರೆ ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಮೇಲೆ ಸರ್ಕಾರ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದೆ. ಜೀವನೋಪಾಯಕ್ಕಾಗಿ ವರ್ಷಗಳಿಂದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಕೈಹಾಕಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ವೇಳೆ ಈಶ್ವರ ಖಂಡ್ರೆ ಅರಣ್ಯ ಅತಿಕ್ರಮಣ ತೆರವುಗೊಳಿಸುವ ಆದೇಶಗಳನ್ನು ಹೊರಡಿಸಿದ್ದರು. ಡಿ.ಕೆ.ಶಿವಕುಮಾರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಈಶ್ವರ ಖಂಡ್ರೆ ಈ ಆದೇಶ ಹೊರಡಿಸಿರುವುದರಿಂದ ಮಲೆನಾಡು ಮತ್ತು ಕರಾವಳಿ ಭಾಗದ ಬಡ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದೇಶವನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಮಲೆನಾಡು ಮತ್ತು ಕರಾವಳಿ ಭಾಗದ ಜನರನ್ನು ಮಾತ್ರ ಗುರಿಯಾಗಿಸಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ. ಜನರ ವಸತಿ ಹಕ್ಕನ್ನು ಕಸಿದುಕೊಳ್ಳುವ ಹಾಗೂ ಅವರನ್ನು ಗ್ರಾಪಂ ಮತ್ತು ನಗರಸಭೆಯ ದಾಖಲೆಗಳಿಂದ ಹೊರಗಿಡುವ ಪ್ರಯತ್ನ ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಸರ್ಕಾರ ಬೃಹತ್ ಯೋಜನೆಗಳ ಹೆಸರಿನಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ. ಜನರ ಹಕ್ಕುಗಳನ್ನು ಕಸಿದುಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುವ ಬದಲು, ಜನರ ಹಿತವನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಸ್ತೂರಿರಂಗನ್ ವರದಿಯ ಅನುಷ್ಠಾನದಲ್ಲಿಯೂ ಸ್ಥಳೀಯ ಜನರ ಬದುಕು ಹಾಗೂ ಹಕ್ಕುಗಳನ್ನು ಪರಿಗಣಿಸಬೇಕು. ರಾಜ್ಯ ಸರ್ಕಾರ ತನ್ನ ಜನವಿರೋಧಿ ನಿರ್ಧಾರಗಳನ್ನು ಕೈಬಿಡದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಕಾರ್ಯದರ್ಶಿ ನಾಗರಾಜ ನಾಯ್ಕ, ತಾಪಂ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ಗ್ರಾಪಂ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ ಶೆಟ್ಟಿ ಚಿಪಗಿ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ ಪ್ರಮುಖರಾದ ಆರ್.ವಿ. ಹೆಗಡೆ ಚಿಪಗಿ, ಶ್ರೀರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ಕಾಂಗ್ರೆಸ್ ಶಾಸಕರು, ಉಪಸಭಾಧ್ಯಕ್ಷರು ಕೇವಲ ಭಾಷಣಕ್ಕೆ ಸೀಮಿತರಾಗಿದ್ದು, ಸಚಿವ ಈಶ್ವರ ಖಂಡ್ರೆ ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಜನವಿರೋಧಿ ನಿಯಮ ರೂಪಿಸಿ, ಜನರನ್ನು ಒಕ್ಕೆಲೆಬ್ಬಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ. ಜನರ ಶವಪೆಟ್ಟಿಗೆಗೆ ಸರ್ಕಾರವೇ ಕೊನೆಯ ಮೊಳೆ ಹೊಡೆಯುತ್ತಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದಾನಂದ ಭಟ್ಟ ವಾಗ್ದಾಳಿ ನಡೆಸಿದರು.















Leave a Reply