ಕಿಕ್ಕಿರಿದ ಸಂಗೀತಾಭಿಮಾನಿಗಳ ಮನಸೊರೆಗೊಂಡ ಗಾನ ಸೌರಭ

ಹಂಚಿಕೊಳ್ಳಿ

ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ತೋಟಿಗರ ಕಲ್ಯಾಣ ಸಂಘ ಇದೇ ಪ್ರಪ್ರಥಮ ಬಾರಿಗೆ ಸಂಘಟಿಸಿದ್ದ ಗಾನ ಸೌರಭ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಇಡೀ ಸಭಾಂಗಣದಲ್ಲಿ ಕಕ್ಕಿರಿದು ಸೇರಿದ್ದ ಸಂಗೀತಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ಬಿಯಾಗಿದೆ.
ಯಾವುದೇ ಸಭೆ, ಭಾಷಣಗಳಿಲ್ಲದೇ ನಡೆದ ಸಂಗೀತ ಕಾರ್ಯಕ್ರಮವನ್ನು ತೋಟಿಗರ ಕಲ್ಯಾಣ ಸಂಘದ ಅಧ್ಯಕ್ಷ ಎಂ.ಪಿ.ಹೆಗಡೆ ಬಪ್ಪನಳ್ಳಿ, ಎಂ.ವಿ.ಜೋಶಿ ಕಾನಮೂಲೆ ಹಾಗೂ ಎಲ್ಲ ನಿರ್ದೇಶಕರು ದೀಪ ಬೆಳಗಿ ಉದ್ಘಾಟಿಸಿದರು. ನಂತರ ಆರಂಭಗೊಂಡ ಕಾರ್ಯಕ್ರಮದಲ್ಲಿ ಗಾಯಕಿ ಆರಾಧನ ಹೆಗಡೆ ಕಲ್ಗುಂಡಿಕೊಪ್ಪ ತಮ್ಮ ಸುಮಧುರ ಕಂಠದಲ್ಲಿ ಆರಂಭದಲ್ಲಿ ರಾಗ್ ದುರ್ಗಾವನ್ನು ಕೆಲವು ನಿಮಿಷ ಪ್ರಸ್ತುತಗೊಳಿಸಿ, ನಂತರ ದಾಸರ ಭಜನೆ ಹಾಗೂ ಕೇರಿಮನೆಯರು ರಚಿಸಿದ ಸಾಹಿತ್ಯದ ಸ್ವರ್ಣವಲ್ಲೀ ರಾಜರಾಜೇಶ್ವರಿ ಕುರಿತಾದ ಭಜನ್ ನ್ನು ಹಾಡಿ ಮನ ತಣಿಸಿದರು.
ನಂತರದಲ್ಲಿ ತಮ್ಮ ಸಂಗೀತ ಕಛೇರಿ ನಡೆಸಿಕೊಟ್ಟ ಗಾಯಕ ವಿದ್ವಾನ್ ವಿನಾಯಕ ಹೆಗಡೆ ಮುತ್ಮುರುಡು ಆರಂಭದಲ್ಲಿ ರಾಗ್ ಕೌಶಿತ ರಂಜಿನಿ ಪ್ರಸ್ತುತಗೊಳಿಸಿದರು. ನಂತರ ದಾಸವಾಣಿ, ಮರಾಠಿ ಅಭಂಗ್ ಹಾಗೂ ದಿವಗಿ ಅವಧೂತ ರಾಮಾನಂದರ ಕುರಿತ ಭಕ್ತಗೀತೆ ಮತ್ತು ಮೀರಾ ಭಜನ್ ಗಳನ್ನು 2 ತಾಸುಗಳು ಮಿಕ್ಕಿ ಹಾಡಿ ಸಭೆಯ ಕರತಾಡನಕ್ಕೆ ಭಾಜನರಾದರು.
ಇದೊಂದು ಅಪರೂಪದ ಸಂಗೀತ ಕಾರ್ಯಕ್ರಮ ಎಂಬ ಮಾತು ಪ್ರೇಕ್ಷಕರ ಗ್ಯಾಲರಿಯಲ್ಲಿ ಸಾಕ್ಷಿಯಾಯಿತು. ಇಬ್ಬರು ಗಾಯಕರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಬಸವರಾಜ ಹಿರೇಮಠ ಮತ್ತು ತಬಲಾದಲ್ಲಿ ಉಡುಪಿಯ ಅಶ್ವಥ ಶಣೈ, ಅಜ್ಜೀಬಳ ವಿಜಯೇಂದ್ರ ಹೆಗಡೆ, ತಾಳದಲ್ಲಿ ರವಿ ಹೆಗಡೆ ಹೊಸಗದ್ದೆ ಸಮರ್ಥವಾಗಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ಎಲ್ಲ ಕಲಾವಿದರನ್ನು ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.
ತೋಟಿಗರ ಕಲ್ಯಾಣ ಸಂಘದ ನಿರ್ದೇಶಕ ಎನ್.ಡಿ.ಹೆಗಡೆ ಹಾಲೇರಿಕೊಪ್ಪ ಸ್ವಾಗತಿಸಿ, ವಂದಿಸಿದರು. ಚೈತ್ರಾ ಹೆಗಡೆ, ಭವ್ಯಾ ಹಳೆಯೂರು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *