
ಶಿರಸಿ: ಮನುಷ್ಯನ ಜೀವನದಲ್ಲಿ ಆರೋಗ್ಯವೇ ಅತ್ಯಂತ ದೊಡ್ಡ ಸಂಪತ್ತಾಗಿದ್ದು, ಅದರಲ್ಲೂ ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಮಂಗಳವಾರ ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಬಚಗಾಂವ ಗ್ರಾಮದ ಸಭಾಭವನದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ನಮನ ಚಾರಿಟೇಬಲ್ ಟ್ರಸ್ಟ್, ಶಿರಸಿ ಹಾಗೂ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿರಸಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ದೇಹದ ಅತ್ಯಮೂಲ್ಯ ಅಂಗಗಳಲ್ಲಿ ಕಣ್ಣು ಪ್ರಮುಖವಾದುದು. ಇಂದಿನ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಅಂಗಾಂಗ ಕಸಿಯಂತಹ ಚಿಕಿತ್ಸೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ದೈಹಿಕ ನ್ಯೂನ್ಯತೆಗಳನ್ನು ಸರಿಪಡಿಸುವಲ್ಲಿ ವೈದ್ಯಕೀಯ ವಿಜ್ಞಾನ ಮಹತ್ತರ ಸಾಧನೆ ಮಾಡಿದೆ. ಆದರೆ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ನೇತ್ರದಾನವು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ಮರಣಾನಂತರ ಕಣ್ಣು ದಾನ ಮಾಡುವ ಮೂಲಕ ಇಬ್ಬರು ಅಂಧರ ಬದುಕಿನಲ್ಲಿ ಬೆಳಕು ಮೂಡಿಸಬಹುದು ಎಂದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಸಕರಾಗಿ, ಸಂಸದರಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವುದರ ಜತೆ ಪಕ್ಷದ ಮಹತ್ತರ ಜವಾಬ್ದಾರಿ ವಹಿಸಿಕೊಂಡ ಬಳಿಕ ದೇಶದ ಉದ್ದಗಲಕ್ಕೂ ಪ್ರವಾಸ ಕೈಗೊಂಡ ಪಕ್ಷ ಬಲವರ್ಧನೆ ಮಾಡುತ್ತಿದ್ದಾರೆ. ಅವರ ಜನ್ಮ ದಿನದಂದು ನಮನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟಿ.ಎಸ್.ಎಸ್ ಆಸ್ಪತ್ರೆಯ ಸಹಯೋಗದಲ್ಲಿ ಮನುಷ್ಯದ ದೇಹದ ಪ್ರಮುಖ ಅಂಗಗಳಾದ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನಮನ ಚಾರಿಟೇಬಲ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ನಾಗರಾಜ ಮಡಿವಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಾಯಕರು ಎಂದರು.
ಒಂಬತ್ತು ಬಾರಿ ಶಾಸಕರಾಗಿ, ಸಂಸದರಾಗಿಯೂ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ ಖರ್ಗೆ ಅವರು ಅಭಿವೃದ್ಧಿ ಪರ ಚಿಂತನೆ ಮತ್ತು ಜನಪರ ಆಡಳಿತದ ಮೂಲಕ ದೇಶದಾದ್ಯಂತ ಗೌರವ ಪಡೆದಿದ್ದಾರೆ. ಅವರ ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರುತ.
ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ, ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ, ಆರೋಗ್ಯ ಜಾಗೃತಿ, ರಕ್ತದಾನ, ನೇತ್ರದಾನ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ಮಾಡಿದ್ದೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ದೊಡ್ನಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ತಿರುಮಲೇಶ ಮಡಿವಾಳ, ಸಾಮಾಜಿಕ ಕಾರ್ಯಕರ್ತ ಎಸ್.ಎನ್. ಹೆಗಡೆ ದೊಡ್ನಳ್ಳಿ, ಟಿ.ಎಸ್.ಎಸ್ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಪೂಜಾ ಶೇಟ್, ಪ್ರಮುಖರಾದ ಅಮರ ನೇರಲಕಟ್ಟೆ, ಮಾದೇವ ರೇವಣಕರ ಸೇರಿದಂತೆ ಮತ್ತಿತರರು
ಉಪಸ್ಥಿತರಿದ್ದರು. ಶ್ರೀಧರ ಹೆಗಡೆ ನಿರೂಪಿಸಿ, ವಂದಿಸಿದರು.
ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಬಚಗಾಂವ ಭಾಗದ ಸುಮಾರು 350ಕ್ಕೂ ಜನರು ಭಾಗವಹಿಸಿ, ಕಣ್ಣಿನ ತಪಾಸಣೆ ನಡೆಸಿಕೊಂಡು ವೈದ್ಯರಿಂದ ಮಾರ್ಗದರ್ಶನ ಪಡೆದರು.
ಸುಂದರವಾದ ಈ ಜಗತ್ತನ್ನು ಕಾಣಲು ಕಣ್ಣುಗಳೇ ಮುಖ್ಯವಾಗಿರುವುದರಿಂದ ಅವುಗಳ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು.
-ಭೀಮಣ್ಣ ನಾಯ್ಕ, ಶಾಸಕ
ಮರಣಾನಂತರ ನೇತ್ರದಾನ ಮಾಡುವ ಮೂಲಕ ಇಬ್ಬರ ಜೀವನದಲ್ಲಿ ಹೊಸ ಬೆಳಕು ಮೂಡಿಸಲು ಪ್ರತಿಯೊಬ್ಬರೂ ಮುಂದಾಗಬೇಕು.
-ನಾಗರಾಜ ಮಡಿವಾಳ, ನಮನ ಚ್ಯಾರಿಟೇಬಲ್ ಟ್ರಸ್ಸ್ ಮ್ಯಾನೇಜಿಂಗ್ ಟ್ರಸ್ಟಿ













Leave a Reply