ದಾಖಲೆ ಬಿಡುಗಡೆ ಮಾಡಿ – ಇಲ್ಲವೆ ಕ್ಷಮೇ ಕೇಳಿ …ನಿಂಬಾಳ್ಕರ್ ಗೆ ಸದಾನಂದ ಆಗ್ರಹ

ಹಂಚಿಕೊಳ್ಳಿ

ಶಿರಸಿ: ಎಸ್.ಐ.ಆರ್’ನ್ನು ಬಿಜೆಪಿ ದುರುಪಯೋಗಪಡಿಸಿಕೊಂಡು ಮತದಾರರ ಕೈ ಬಿಡುವ ಷಡ್ಯಂತರ ನಡೆಸಿದೆ ಎನ್ನುವುದಕ್ಕೆ ಅಂಜಲಿ ನಿಂಬಾಳ್ಕರ್ ದಾಖಲೆ ಬಿಡುಗಡೆ ಮಾಡಲಿ ಇಲ್ಲವೇ ಬೇಶರತ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ಅವರು ಬಿಜೆಪಿ ಎಸ್ಐಆರ್ ಅನ್ನು ದುರುಪಯೋಗಪಡಿಸಿಕೊಂಡು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆರಲು ಷಡ್ಯಂತ್ರ ನಡೆಸಿದೆ. ಇದಕ್ಕೆ ಕಾಂಗ್ರೆಸ್ ಬಳಿ ದಾಖಲೆಗಳಿವೆ ಎಂದು ಆರೋಪ ಮಾಡಿರುವುದನ್ನು ಸಮರ್ಥಿಸಿಕೊಳ್ಳಲು ದಾಖಲೆಗಳನ್ನು ಬಿಡುಗಡೆಗೊಳಿಸಲಿ. ವಿನಾಕಾರಣ ಪ್ರಚಾರಕ್ಕೋಸ್ಕರ ಬಿಜೆಪಿಯ ಬಗ್ಗೆ ಆಪಾದನೆ ಮಾಡುವುದು ಸರಿಯಲ್ಲ. ದೇಶದ ಸ್ವಯತ್ತ ಸಂಸ್ಥೆಯಾದ ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತಿರುವುದನ್ನು ಸುಪ್ರೀಂಕೋರ್ಟ್ ಪರಿಶೀಲಿಸಿ ಸಮ್ಮತಿಸಿದೆ. ಹೀಗಿರುವಾಗ ರಾಜಕೀಯ ಉದ್ದೇಶಗಳಿಗಾಗಿ ಎಸ್ಐಆರ್ ಕುರಿತು ಜನರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ಕೈ ಬಿಡಲಿ. ಬಿಜೆಪಿ ದೇಶ ಮತ್ತು ಹಲವಾರು ರಾಜ್ಯಗಳಲ್ಲಿ ಜನರ ವಿಶ್ವಾಸದಿಂದ ಆಡಳಿತಕ್ಕೆ ಬಂದಿದೆಯ ವಿನಹ ಯಾವುದೇ ವಾಮ ಮಾರ್ಗದಿಂದ ಬಂದಿಲ್ಲ. ಇದಕ್ಕೆ ಕೇರಳ ಮತ್ತು ತಮಿಳುನಾಡಿನ ಚುನಾವಣೆಗಳ ಸಾಕ್ಷಿ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದರೆ ನಾಳೆ ಅವರು ಭಾರತದ ನಾಗರೀಕರಲ್ಲ ಎಂದು ಎನ್ನಬಹುದು ಎನ್ನುವ ಅವರ ಹೇಳಿಕೆಯನ್ನು ನೋಡಿದರೆ ನಾಗರಿಕತ್ವ ದೃಢೀಕರಿಸಲು ಯಾವ ದಾಖಲೆಗಳು ಅಗತ್ಯ ಎಂಬ ಮಾಹಿತಿ ಇಲ್ಲದೆ ಅಂಜಲಿ ನಿಂಬಾಳ್ಕರ್ ಮಾತನಾಡಿದಂತೆ ಇದೆ. ಅಕ್ರಮ ವಲಸಿಗರು ಒಳನುಸುಳಲು ನರೇಂದ್ರ ಮೋದಿ, ಅಮಿತ್ ಶಾ ಕಾರಣ ಎಂದು ಪ್ರಶ್ನಿಸುವ ಅಂಜಲಿ ನಿಂಬಾಳ್ಕರ್ ಅವರಿಗೆ ಈ ಹಿಂದೆ ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿ ಇರುವಾಗ ಅಥವಾ ಗಡಿ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವಾಗ ಒಳನುಸುಳುಕೋರರನ್ನು ತಡೆಯಲು ಯಾವ ಕ್ರಮ ಕೈಗೊಂಡಿತ್ತು ಎನ್ನುವುದನ್ನು ಹೇಳಲಿ. ತೀರ ಇತ್ತೀಚಿನವರೆಗೂ ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಇಲಾಖೆಗೆ ಯಾವುದೇ ಸಹಕಾರ ನೀಡದ ರಾಜ್ಯ ಸರ್ಕಾರವನ್ನು ನೋಡಿದ್ದೇವೆ. ಈಗ ಕರ್ನಾಟಕದಲ್ಲಿ ನೆಲೆಸಿರುವ ಜನರಿಗೆ ಎಸ್ಐಆರ್ ಉದ್ದೇಶದಿಂದಲೇ ಪಿ.ಆರ್.ಸಿ ಯನ್ನು ರಾಜ್ಯ ಸರ್ಕಾರ ನೀಡುತ್ತಿರುವುದು ಸಾಂವಿಧಾನಿಕವಾಗಿ ಎಷ್ಟು ಸರಿ ಎನ್ನುವುದನ್ನು ಹೇಳಲಿ. ಯಾವುದೇ ಅರ್ಹ ಭಾರತೀಯರ ಮತದಾನದ ಹಕ್ಕು ವಂಚಿತವಾಗದಂತೆ ನೋಡಿಕೊಳ್ಳುತ್ತಿರುವಾಗ ಮತದಾರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳನ್ನು ಸೇರಿಸಲು ಕಾಂಗ್ರೆಸ್ ಜಾರಿಗೆ ತರುತ್ತಿರುವ ಪಿ.ಆರ್.ಸಿ ಕಾರಣವಾಗಬಹುದು. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗದೆ ಇದರ ಫಲಾನುಭವಿಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಮತದಾರ ಪಟ್ಟಿಗೆ ಜೋಡಿಸಿಕೊಳ್ಳುವ ಪ್ರಯತ್ನಕ್ಕೆ ಹೊರಟಿದೆ ಎನ್ನುವುದು ಜನರಿಗೆ ತಿಳಿದಿದೆ. ಲೋಕಸಭೆ ಚುನಾವಣೆ ನಂತರ ಈಗ ಉತ್ತರ ಕನ್ನಡಕ್ಕೆ ಬಂದು
ಕಾಂಗ್ರೆಸ್ಸಿನ ನಾಯಕರುಗಳನ್ನು ಮೆಚ್ಚಿಸಲು ಮಾಧ್ಯಮ ಹೇಳಿಕೆಯ ಮೂಲಕ ವಿನಾಕಾರಣ ಬಿಜೆಪಿಯ ಮೇಲೆ ಆರೋಪ ಮಾಡಿ ಪಕ್ಷದಲ್ಲಿ ತಮ್ಮ ಸ್ಥಾನಗಟ್ಟಿ ಗೊಳಿಸಿಕೊಳ್ಳಲು ಅಂಜಲಿ ನಿಂಬಾಳ್ಕರ್ ಹೇಳಿಕೆ ನೀಡಿದಂತೆ ತೋರುತ್ತದೆ ಎಂದು ಆರೋಪಿಸಿದರು.
ಬಿಜೆಪಿ ಪ್ರತಿಯೊಂದು ಬೂತ್ ನಲ್ಲಿಯೂ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ತಪ್ಪಿ ಹೋಗದಂತೆ ಎಲ್ಲ ರೀತಿಯಲ್ಲಿ ತನ್ನ ಕಾರ್ಯಕರ್ತರ ಸಂಘಟನೆಯ ಮೂಲಕ ಪ್ರಯತ್ನಿಸುತ್ತಿರುವುದನ್ನು ಕಾಂಗ್ರೆಸ್ ಎಸ್.ಐ
ಆರ್ ಉಸ್ತುವಾರಿಗಳು ಗಮನಿಸಲಿ ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *