ಶಿರಸಿ(ಉತ್ತರಕನ್ನಡ): ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ವಿಷಪೂರಿತ ಹಾವು ಕಚ್ಚಿ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃ*ತಪಟ್ಟಿರುವ ಹೃದಯವಿದ್ರಾವಕ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಹಾವಿನ ಕಡಿತಕ್ಕೊಳಗಾದ ಮೃತನ ಸಹೋದರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಹಸ್ರಳ್ಳಿಯ ಪುಟ್ಟಪ್ಪ ನಾಯ್ಕ ಅವರ 12 ವರ್ಷದ ಪುತ್ರ, ಆರನೇ ತರಗತಿ ವಿದ್ಯಾರ್ಥಿ ಮಿಥುನ್ ಮೃ*ತಪಟ್ಟ ದುರ್ದೈವಿ. ಈತನ ಸಹೋದರಿ ದೀಕ್ಷಾ ಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ಬಾಲಕಿ.

ಮಾಹಿತಿಯ ಪ್ರಕಾರ, ರಾತ್ರಿ ಊಟ ಮುಗಿಸಿ ಮಿಥುನ್ ಮತ್ತು ದೀಕ್ಷಾ ತಮ್ಮ ತಂದೆಯ ಜೊತೆಯಲ್ಲಿ ಮಲಗಿದ್ದರು. ಬೆಳಗಿನ ಜಾವ ನಿದ್ದೆಯಲ್ಲಿದ್ದಾಗಲೇ ಮಕ್ಕಳಿಬ್ಬರು ಏಕಾಏಕಿ ಎದ್ದು ವಾಂತಿ ಮಾಡಲು ಶುರುಮಾಡಿದ್ದಾರೆ. ಗಾಬರಿಗೊಂಡ ಪಾಲಕರು ತಕ್ಷಣ ಲೈಟ್ ಹಾಕಿ ನೋಡಿ, ಅಕ್ಕಪಕ್ಕದವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ನೆರೆಹೊರೆಯವರು ಧಾವಿಸಿ ಬರುವಷ್ಟರಲ್ಲಿ ಕತ್ತಲಲ್ಲಿ ಮನೆಯೊಳಗಿಂದ ಹಾವೊಂದು ಹೊರಗೆ ಹೋಗುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ.
ಕೂಡಲೇ ಎಚ್ಚೆತ್ತ ಪಾಲಕರು ಹಾಗೂ ಸ್ಥಳೀಯರು ರಾತ್ರೋರಾತ್ರಿ ಇಬ್ಬರೂ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಾಲಕ್ಷ್ಮೀ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಮಿಥುನ್ ಮೃ*ತಪಟ್ಟಿದ್ದಾನೆ. ದೀಕ್ಷಾಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ವೈದ್ಯಕೀಯ ತಪಾಸಣೆ ವೇಳೆ ಮಿಥುನ್‌ನ ಕಿವಿಗೆ ಹಾಗೂ ದೀಕ್ಷಾಳ ಕೈಬೆರಳಿಗೆ ವಿಷಪೂರಿತ ಹಾವು ಕಚ್ಚಿರುವುದು ಖಚಿತವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಬನವಾಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Leave a Reply