ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿಕೊಳ್ಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಆನ್-ಡ್ಯೂಟಿ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರು ತಮ್ಮ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಪಾರುಮಾಡಿದ್ದು, ಅವರ ಕಾರ್ಯಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮುರುಡೇಶ್ವರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ರೈಲು ಸಂಖ್ಯೆ 16312 ಅಪ್, ಭಾನುವಾರ(ಜು.12) ಬೆಳಿಗ್ಗೆ 07:56 ರ ಸುಮಾರಿಗೆ ನಿಲ್ದಾಣದಿಂದ ಹೊರಡಲು ಮುಂದಾಗಿತ್ತು. ಈ ವೇಳೆ 22 ವರ್ಷದ ಪ್ರಯಾಣಿಕ ಮೊಹಮ್ಮದ್ ಗೌಫುರ್, ವೇಗ ಪಡೆದುಕೊಳ್ಳುತ್ತಿದ್ದ ರೈಲಿನಿಂದ ಏಕಾಏಕಿ ಕೆಳಗಿಳಿಯಲು ಯತ್ನಿಸಿದ್ದಾನೆ. ಈ ಆತುರದ ನಿರ್ಧಾರದಿಂದ ಆಯತಪ್ಪಿದ ಆತ ರೈಲಿನೊಂದಿಗೆ ಪ್ಲಾಟ್‌ಫಾರ್ಮ್ ಮೇಲೆ ಎಳೆಯಲ್ಪಟ್ಟಿದ್ದಾನೆ.

ಪ್ರಯಾಣಿಕನು ಆಯತಪ್ಪಿ ಬೀಳುತ್ತಿರುವುದನ್ನು ತಕ್ಷಣವೇ ಗಮನಿಸಿದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್, ಕ್ಷಣವೂ ತಡಮಾಡದೇ ಸ್ಥಳಕ್ಕೆ ಧಾವಿಸಿ ಯುವಕನ ಪ್ರಾಣ ಉಳಿಸಿದ್ದಾರೆ. ಧೈರ್ಯದಿಂದ ಆ ಯುವಕನನ್ನು ಗಟ್ಟಿಯಾಗಿ ಹಿಡಿದುಕೊಂಡು, ಆತ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಪಾಯಕಾರಿ ಜಾಗಕ್ಕೆ ಬೀಳದಂತೆ ತಡೆದು ನಿಲ್ಲಿಸಿದ್ದಾರೆ. ರೈಲು ಸಂಪೂರ್ಣವಾಗಿ ನಿಲ್ಲುವವರೆಗೂ ಪ್ರಯಾಣಿಕನಿಗೆ ಯಾವುದೇ ರೀತಿಯ ಅಪಾಯವಾಗದಂತೆ ರಕ್ಷಿಸುವ ಮೂಲಕ ಸಂಭವಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದನ್ನು ತಮ್ಮ ಅತ್ಯುನ್ನತ ಕರ್ತವ್ಯ ಪ್ರಜ್ಞೆಯಿಂದ ತಪ್ಪಿಸಿದ್ದಾರೆ.
ಗಣಪತಿ ನಾಯ್ಕ್ ಅವರ ಈ ಶ್ಲಾಘನೀಯ ಕರ್ತವ್ಯ ನಿಷ್ಠೆಯನ್ನು ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಸಂತೋಷ್ ಕುಮಾರ್ ಝಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಂಸ್ಥೆಯ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿದ ಈ ದಿಟ್ಟ ಕಾರ್ಯಕ್ಕಾಗಿ ಗಣಪತಿ ನಾಯ್ಕ್ ಅವರಿಗೆ 10,000 ರೂಪಾಯಿ ನಗದು ಬಹುಮಾನವನ್ನು ಅವರು ಘೋಷಣೆ ಮಾಡಿದ್ದಾರೆ.
ಸಿಎಂಡಿ ಅವರ ಪರವಾಗಿ ಕೊಂಕಣ ರೈಲ್ವೆಯ ಕಾರವಾರದ ವಲಯ ಮೇಲ್ವಿಚಾರಕ ಸಂಜೀವ ಪೆಡ್ನೇಕರ್ ಅವರು ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ನಗದು ಪ್ರಶಸ್ತಿ ಹಸ್ತಾಂತರಿಸಿದರು.
ಪಾಯಿಂಟ್ಸ್‌ಮನ್ ಅವರ ಈ ಸಾಹಸ ಕಾರ್ಯ ಇಡೀ ರೈಲ್ವೆ ಇಲಾಖೆಗೆ ಹೆಮ್ಮೆ ತಂದಿದೆ ಎಂದು ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಕೆ.ಸುಧಾ ಕೃಷ್ಣಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.



Leave a Reply