ಕಾರವಾರದ ಬೈತಕೋಲ್ ಬಂದರಿನಲ್ಲಿ ಸಿಬ್ಬಂದಿಗಳ ಅಚಾತುರ್ಯದಿಂದಾಗಿ ಸಾವಿರಾರು ಲೀಟರ್ ಬಿಸಿ ಡಾಂಬರ್ ಸಮುದ್ರದ ಪಾಲಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮಧ್ಯಪ್ರಾಚ್ಯದಿಂದ ಕಾರವಾರಕ್ಕೆ ಡಾಂಬರ್ ತುಂಬಿಕೊಂಡು ಬಂದಿದ್ದ ‘ಮರಿನ್ ಫ್ಯೂಯಲ್’ ಕಂಪನಿಗೆ ಸೇರಿದ ಬೃಹತ್ ಹಡಗಿನಿಂದ ಡಾಂಬರ್ ಅನ್ನು ಬಂದರಿಗೆ ಅನ್‌ಲೋಡ್ ಮಾಡುವಾಗ ಈ ಭಾರಿ ಅವಘಡ ಸಂಭವಿಸಿದೆ. ಅಪಾರ ಪ್ರಮಾಣದ ಡಾಂಬರ್ ಸಮುದ್ರದ ನೀರಿಗೆ ಸೇರ್ಪಡೆಯಾಗಿರುವುದು ಕರಾವಳಿಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಅಲಿಗದ್ದಾದ ಎಂ.ಎಂ.ಸಿ.ಎಲ್ ಕಂಪನಿಗೆ ಸೇರಿದ ಈ ಡಾಂಬರ್ ಅನ್ನು ಹಡಗಿನಿಂದ ಬಂದರಿಗೆ ಡಂಪ್ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಡಾಂಬರ್ ಪಂಪ್ ಮಾಡುವ ಪೈಪ್‌ನಲ್ಲಿ ಅತಿಯಾದ ಒತ್ತಡ ಉಂಟಾಗಿ ಏಕಾಏಕಿ ಪೈಪ್‌ಲೈನ್ ಒಡೆದುಹೋಗಿದೆ. ಹಡಗಿನ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಅಚಾತುರ್ಯವೇ ಈ ಘಟನೆಗೆ ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಪೈಪ್‌ಲೈನ್ ಒಡೆದ ರಭಸಕ್ಕೆ ಪೈಪ್‌ನಲ್ಲಿದ್ದ ನೂರಾರು ಲೀಟರ್ ಬಿಸಿ ಡಾಂಬರ್ ನೇರವಾಗಿ ಸಮುದ್ರದ ಒಡಲು ಸೇರಿದೆ.

ಸಾವಿರಾರು ಲೀಟರ್‌ನಷ್ಟು ರಾಸಾಯನಿಕಯುಕ್ತ ಬಿಸಿ ಡಾಂಬರ್ ಏಕಾಏಕಿ ಸಮುದ್ರ ಸೇರಿರುವುದರಿಂದ ಜಲಚರಗಳು ಹಾಗೂ ಕರಾವಳಿಯ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂದರು ಅಧಿಕಾರಿಗಳು, ಪರಿಸರ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ನಿರೀಕ್ಷೆಯಿದ್ದು, ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರಿಯಲಿದೆ.



Leave a Reply