ಬಿಜೆಪಿಗೆ ಶಾಸಕ ಹೆಬ್ಬಾರ್ ಅವರನ್ನು  ಟೀಕಿಸುವ ನೈತಿಕ ಹಕ್ಕಿದೆಯೇ? : ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಪ್ರಶ್ನೆ ? 

ಹಂಚಿಕೊಳ್ಳಿ

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದ ಬಳಿಕ ಅವರ ರಾಜಕೀಯ ಕಾರ್ಯವೈಖರಿ ಕುರಿತು ಟೀಕಿಸುವ ನೈತಿಕ ಹಕ್ಕನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ತಾಲೂಕು ಸಮೀತಿ ಟೀಕಿಸಿದೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮೀತಿಯವರು

ಶಾಸಕ ಶಿವರಾಮ ಹೆಬ್ಬಾರ ಅವರನ್ನು ಕ್ಷೇತ್ರದ ಮತದಾರರು 2023ರಲ್ಲಿ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದಾರೆ. ಆದರೆ ಅವರನ್ನು ಬಿಜೆಪಿ ಪಕ್ಷದಿಂದಲೇ ಉಚ್ಚಾಟಿಸಿರುವುದು ಗಮನಾರ್ಹ. ಇಂತಹ ಸಂದರ್ಭದಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸುವುದು ರಾಜಕೀಯ ಹತಾಶೆಯ ಪ್ರತೀಕ ಎಂದು  ಟೀಕಿಸಿದೆ.

ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆ ಸೇರಿದಂತೆ ಹಲವು ವಿಚಾರಗಳಲ್ಲಿ ಶಾಸಕ ಹೆಬ್ಬಾರರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕಾರ್ಯ ಮುಂದುವರಿದಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ-52ರ ದುಸ್ಥಿತಿಯ ಬಗ್ಗೆಯೂ ಪ್ರಶ್ನಿಸಿದ ಅವರು, ರಸ್ತೆಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದರೂ ಈ ಕುರಿತು ಬಿಜೆಪಿ ಮುಖಂಡರು ಮತ್ತು ಸಂಸದರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಯಲ್ಲಾಪುರ ಪಟ್ಟಣದಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ವಸತಿ ಯೋಜನೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅತಿಕ್ರಮಣದಾರರ ಮನೆ ತೆರಿಗೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯಲು ನಡೆಸಿದ ಪ್ರಯತ್ನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕ ಹೆಬ್ಬಾರರು ತೊಡಗಿಸಿಕೊಂಡಿದ್ದಾರೆ ಎಂದು ಸಮಿತಿ ಹೇಳಿದೆ

ಬೇಡ್ತಿ ಹೊಳೆಯ ನೀರನ್ನು ಬಳಸಿಕೊಂಡು ಕಿರವತ್ತಿ, ಮದನೂರ, ಕಣ್ಣೀಗೇರಿ, ಚಂದಗುಳಿ, ಕಂಪ್ಲಿ  ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ನೀರಾವರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಡಗೋಡು ತಾಲೂಕು ಸೇರಿದಂತೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳು ರೈತರಿಗೆ ಅನುಕೂಲವಾಗಲಿವೆ ಎಂದು ತಿಳಿಸಿದೆ.

ಯಲ್ಲಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ ಎಸ್ ಭಟ್ ಮಾತನಾಡಿ ,ಯಲ್ಲಾಪುರ ಪಟ್ಟಣದಲ್ಲಿ ಕಾರ್ಮಿಕ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತಹಶೀಲ್ದಾರ್ ಕಚೇರಿ, ಕಾರ್ಮಿಕ ಇಲಾಖೆ, ಪಟ್ಟಣ ಪಂಚಾಯಿತಿ, ಅಗ್ನಿಶಾಮಕ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆಯ ಉನ್ನತೀಕರಣ ಸೇರಿದಂತೆ ಹಲವು ಕಾಮಗಾರಿಗಳು ನಡೆದಿವೆ. ಕಾಲೇಜು ಕಟ್ಟಡ, ಆಡಿಟೋರಿಯಂ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳೂ ನಡೆದಿವೆ ಎಂದು  ವಿವರಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎನ್.ಕೆ. ಭಟ್ಟ ಮೆಣಸುಪಾಲ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಫಾರಂ ನಂ.7 ಬಳಸಿ ಕಾಂಗ್ರೆಸ್ ಬೆಂಬಲಿಗರ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗಿದೆ ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ದೇವಿದಾಸ ಶಾನಭಾಗ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರು ಹಾಗೂ ಮಹಿಳೆಯರಿಗೆ ಆರ್ಥಿಕ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಜನರು ಯೋಜನೆಗಳ ಪರಿಣಾಮವನ್ನು ಅರಿತುಕೊಂಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಗನ್ನಾಥ ರೇವಣಕರ, ಗಣೇಶ ಪಾಠಣಕರ, ಸತೀಶ ನಾಯ್ಕ, ಅನಿಲ್ ಮರಾಠೆ, ಪೂಜಾ ನೇತ್ರೇಕರ, ಅಕ್ಷಯ ರೇವಣಕರ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *