ಬಡವರ ಮನೆ, ನಿವೇಶನ ಹಕ್ಕು ಕಸಿಯುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ: ಯಲ್ಲಾಪುರ ಗ್ರಾಮೀಣ ಭಾಗದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನ

ಹಂಚಿಕೊಳ್ಳಿ

ಯಲ್ಲಾಪುರ: ಗ್ರಾಮೀಣ ಭಾಗದ ಬಡವರ ಮನೆ ಹಾಗೂ ನಿವೇಶನದ ಹಕ್ಕನ್ನು ಕಸಿಯುತ್ತಿರುವ ಕರ್ನಾಟಕ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲದ ವತಿಯಿಂದ ಇಂದು ಕಣ್ಣೀಗೇರಿ, ಮದನೂರು ಮತ್ತು ಕಿರವತ್ತಿ ಗ್ರಾಮ ಪಂಚಾಯತ್ ಆವರಣದಲ್ಲಿ ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನ ಹಾಗೂ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ ಅವರು, “ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಬಡ ಜನರಿಗೆ ಸಿಗಬೇಕಾದ ಮನೆ ಮತ್ತು ನಿವೇಶನದ ಹಕ್ಕಿಗೆ ಸರ್ಕಾರ ಕನ್ನ ಹಾಕುತ್ತಿದೆ. ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಈ ಸರ್ಕಾರ, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಬಡವರ ಆಶಯಗಳೊಂದಿಗೆ ಆಟವಾಡುತ್ತಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ” ಎಂದು ಎಚ್ಚರಿಸಿದರು.

ಈ ಆಂದೋಲನದಲ್ಲಿ ಮಂಡಳದ ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಭಟ್ಟ ಹಾಸಣಗಿ, ಸುರೇಶ ಮುಂಡಗಿಕರ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ, ಮಹಿಳಾಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ, ಮಂಡಳ ಉಪಾಧ್ಯಕ್ಷರಾದ ಸುನಂದಾ ‌ಮರಾಠಿ, ಪ್ರಮುಖರಾದ ಗಾಂಧಿ ಸೋಮಾಪುರಕರ, ಅರ್ಜುನ ಬೆಂಗೇರಿ, ಸುಭಾಷ ಶೇಷಗಿರಿ, ವಿಠ್ಠು ಪಟಗಾರೆ, ಮಂಜು ಪಾಟೀಲ, ಮಹೇಶ ಕಾಸರಕರ, ಭಾಸ್ಕರ ಮರಾಠಿ ಪಾಲ್ಗೊಂಡಿದ್ದರು.

ಅಲ್ಲದೇ ಪದಾಧಿಕಾರಿಗಳಾದ ಮಹೇಶ ದೇಸಾಯಿ, ಚಂದು ಮಡಾಕರ, ವಿಠ್ಠು ಪಾಂಡ್ರಮೀಸೆ, ದೊಂಡು ಪಾಟೀಲ, ಪ್ರಕಾಶ ಶಹಾಪುರಕರ, ಶಂಕರ್ ಗೊಂದಳಿ, ನವಲು‌ ಜೋರೆ, ರಾಮು ಸೇರಿದಂತೆ ಪಕ್ಷದ ಹಿರಿಯ ಪ್ರಮುಖರು, ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ, ಸರ್ಕಾರದ ಬಡವರ ವಿರೋಧಿ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧ್ವನಿ ಎತ್ತಿದರು.

Leave a Reply

Your email address will not be published. Required fields are marked *