
ಯಲ್ಲಾಪುರ: ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರ ಮಳೆಯ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಿಷೇಧಿಸಲಾಗಿದ್ದ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳು ಇದೀಗ ಪ್ರವಾಸಿಗರಿಗೆ ಮುಕ್ತವಾಗಿವೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಷೇಧ ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದು, ಇದರೊಂದಿಗೆ ಯಲ್ಲಾಪುರ- ಮುಂಡಗೋಡ ತಾಲೂಕಿನ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಮೂಡಿದೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಳೆ ಹಾಗೂ ಪ್ರತಿಕೂಲ ಹವಾಮಾನದ ಕಾರಣದಿಂದ ಸಾತೋಡ್ಡಿ ಜಲಪಾತ, ಕಾನೂರು ಜಲಪಾತ, ಶಿರಲೆ ಜಲಪಾತ, ಲಾಲಗುಳಿ ಸಮೀಪದ ಪ್ರವಾಸಿ ತಾಣ, ಕಾಳಿ ನದಿ ತೂಗುಸೇತುವೆ, ಹೆಗ್ಗಾರಗುಡ್ಡ, ಸೂರ್ಯಕಲ್ಯಾಣಿಗುಡ್ಡ ಹಾಗೂ ಅತ್ತಿವೇರಿ ಸೇರಿದಂತೆ ತಾಲೂಕಿನ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರೂ ನಿಷೇಧ ಮುಂದುವರಿದಿರುವುದರಿಂದ ಸ್ಥಳೀಯ ಗ್ರಾಮ ಅರಣ್ಯ ಸಮಿತಿಗಳು (VFC), ಪ್ರವಾಸೋದ್ಯಮ ಅವಲಂಬಿತ ವ್ಯಾಪಾರಿಗಳು ಹಾಗೂ ಪ್ರವಾಸಿಗರಿಂದ ಅಸಮಾಧಾನ ವ್ಯಕ್ತವಾಗಿತ್ತು.
ಹಳ್ಳಿನ್ಯೂಸ್ ವರದಿಗೆ ಸ್ಪಂದನೆ
ಪ್ರವಾಸಿ ತಾಣಗಳ ನಿಷೇಧ ಮುಂದುವರಿಸಿರುವ ಕುರಿತು ಹಳ್ಳಿನ್ಯೂಸ್ ವಿಸ್ತೃತ ವರದಿ ಪ್ರಕಟಿಸಿ, ಮಳೆ ಕಡಿಮೆಯಾದರೂ ಪ್ರವಾಸಿ ತಾಣಗಳನ್ನು ತೆರೆಯದಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಆಗುತ್ತಿರುವ ತೊಂದರೆಗಳ ಕುರಿತು ಗಮನ ಸೆಳೆದಿತ್ತು.
ಪ್ರವಾಸಿ ತಾಣಗಳನ್ನು ಶೀಘ್ರ ತೆರೆಯಬೇಕು ಎಂಬ ಆಗ್ರಹವೂ ವರದಿಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಈ ಬಗ್ಗೆ ತಾಲೂಕು ಬಿಜೆಪಿ ಘಟಕವೂ ಪತ್ರಿಕಾಗೋಷ್ಠಿ ನಡೆಸಿ, ಪ್ರವಾಸಿ ತಾಣಗಳ ನಿಷೇಧ ಮುಂದುವರಿಸಿರುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಸ್ಥಳೀಯರ ಜೀವನೋಪಾಯದ ಮೇಲೂ ನಿಷೇಧದ ಪರಿಣಾಮ ಬೀರುತ್ತಿದೆ ಎಂದು ಒತ್ತಾಯಿಸಲಾಗಿತ್ತು.
ಕೊನೆಗೂ ನಿಷೇಧ ತೆರವು
ಸ್ಥಳೀಯರು, ಗ್ರಾಮ ಅರಣ್ಯ ಸಮಿತಿಗಳು, ಪ್ರವಾಸಿಗರು ಹಾಗೂ ವಿವಿಧ ಸಂಘಟನೆಗಳ ಒತ್ತಾಯದ ಬೆನ್ನಲ್ಲೇ ಇದೀಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿಷೇಧ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಇದರೊಂದಿಗೆ ಸಾತೋಡ್ಡಿ, ಕಾನೂರು, ಶಿರಲೆ, ಲಾಲಗುಳಿ ಸಮೀಪದ ಪ್ರವಾಸಿ ತಾಣ, ಕಾಳಿ ನದಿ ತೂಗುಸೇತುವೆ, ಹೆಗ್ಗಾರಗುಡ್ಡ, ಸೂರ್ಯಕಲ್ಯಾಣಿಗುಡ್ಡ, ಅತ್ತಿವೇರಿ ಸೇರಿದಂತೆ ತಾಲೂಕಿನ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿವೆ.
ತಿಂಗಳುಗಳ ಬಳಿಕ ಪ್ರವಾಸಿ ತಾಣಗಳು ಪುನಃ ತೆರೆಯಲ್ಪಟ್ಟಿರುವುದರಿಂದ ಪ್ರವಾಸಿಗರು ಹಾಗೂ ಸ್ಥಳೀಯ ಪ್ರವಾಸೋದ್ಯಮ ಅವಲಂಬಿತ ವ್ಯಾಪಾರಿಗಳಲ್ಲಿ ಸಂತಸ ಮೂಡಿದೆ.
ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಪ್ರವಾಸಿ ತಾಣಗಳ ನಿಯಮಗಳನ್ನು ಪಾಲಿಸುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.















Leave a Reply