ಯಲ್ಲಾಪುರ, : ಗ್ರಾಮೀಣ ಭಾಗದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಜನರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಮೂಡಿಸುವಲ್ಲಿ ಶಾರದಾ ಉತ್ಸವ ಸಮಿತಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ ಹೇಳಿದರು.
ತಾಲೂಕಿನ ಕಳಚೆಯಲ್ಲಿ ಲಕ್ಷ್ಮೀ ನರಸಿಂಹ ಯುವಕ ಸಂಘ ಹಾಗೂ ಶಾರದಾ ಉತ್ಸವ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡ ಶಾರದಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಶಾರದಾ ಉತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬರುವ ಮೂಲಕ ಸಮಿತಿಯು ಮಾದರಿಯಾಗಿದೆ. ಎಲ್ಲರ ಸಹಭಾಗಿತ್ವವಿದ್ದಾಗ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯ ಎಂದರು.
ಹಿರಿಯ ನ್ಯಾಯವಾದಿ ಜಿ.ಆರ್. ಹೆಗಡೆ ಮಾತನಾಡಿ, ಇಲ್ಲಿನ ಶಾರದಾ ಉತ್ಸವ ಸಮಿತಿಯ ಕಲಾತ್ಮಕ ಕೊಡುಗೆ ಅನನ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ರವಿ ಹುಳಸೆ ಮಾತನಾಡಿ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಈ ನೆಲದ ಘನತೆಯನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸುದೀರ್ಘ ಕಾಲದಿಂದ ಶಾರದಾ ಉತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಸಂಕಷ್ಟಗಳ ನಡುವೆಯೂ ಬದುಕನ್ನು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿರುವುದು ಶ್ಲಾಘನೀಯ ಎಂದರು.
ಹಿರಿಯ ಸಹಕಾರಿ ಉಮೇಶ ಭಾಗ್ವತ್ ಉಪಸ್ಥಿತರಿದ್ದರು. ದಿಶಾ ಹೆಬ್ಬಾರ್ ಪ್ರಾರ್ಥಿಸಿದರು. ರಾಮಕೃಷ್ಣ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಗಾಂವ್ಕಾರ್ ವಂದಿಸಿದರು.















Leave a Reply