ಮಳೆ ಕಡಿಮೆಯಾದರೂ ತೆರವುಗೊಳ್ಳದ ಪ್ರವಾಸಿ ತಾಣಗಳ ನಿಷೇಧ: ಯಲ್ಲಾಪುರದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರ ತೀವ್ರ ಆಕ್ರೋಶ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳ ಮೇಲಿನ ನಿಷೇಧವನ್ನು ಮಳೆ ಕಡಿಮೆಯಾಗಿದ್ದರೂ ಇನ್ನು ಕೂಡ ತೆರವುಗೊಳಿಸದಿರುವ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಕ್ರಮಕ್ಕೆ ಸ್ಥಳೀಯ ಗ್ರಾಮ ಅರಣ್ಯ ಸಮಿತಿಗಳು (VFC) ಮತ್ತು ಪ್ರವಾಸಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ತಾಲೂಕಿನಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಸಿದ್ಧ ಜಲಪಾತಗಳಾದ ಸಾತೊಡ್ಡಿ ಫಾಲ್ಸ್, ಕಾನೂರ ಫಾಲ್ಸ್, ಶಿರ್ಲೆ ಫಾಲ್ಸ್ ಹಾಗೂ ಪ್ರಮುಖ ವೀಕ್ಷಣಾ ತಾಣಗಳಾದ ಹೆಗ್ಗಾರಮನೆ ಗುಡ್ಡ, ಸೂರ್ಯ ಕಲ್ಯಾಣಿ ಗುಡ್ ವ್ಯೂ ಪಾಯಿಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಸಿಗರಿಗೆ ಕಡ್ಡಾಯ ನಿಷೇಧ ಹೇರಲಾಗಿತ್ತು. ಮಳೆಗಾಲದಲ್ಲಿ ಕಲ್ಲುಗಳು ಜಾರುವುದು, ಹೊಳೆ-ತೊರೆಗಳು ತುಂಬಿ ಹರಿಯುವುದು ಮತ್ತು ಭೂಕುಸಿತದ ಭೀತಿ ಇದ್ದಿದ್ದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿತ್ತು. ಆದರೆ, ಪ್ರಸ್ತುತ ಮಳೆ ಗಣನೀಯವಾಗಿ ಕಡಿಮೆಯಾಗಿದ್ದರೂ ಅಧಿಕಾರಿಗಳು ಮಾತ್ರ ಇದುವರೆಗೂ ನಿಷೇಧ ಹಿಂಪಡೆಯುವ ಯಾವುದೇ ಆದೇಶ ಹೊರಡಿಸದೇ ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸಂಬಳವಿಲ್ಲದೆ ಸಂಕಷ್ಟದಲ್ಲಿ ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿ:
ಸ್ಥಳೀಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ಸಂಗ್ರಹಿಸುವ ಪ್ರವೇಶ ಶುಲ್ಕದಿಂದಲೇ ಅಲ್ಲಿನ ಕಾವಲುಗಾರರಿಗೆ ಮತ್ತು ಸ್ವಚ್ಛತಾ ಸಿಬ್ಬಂದಿಗೆ ಸಂಬಳ ನೀಡಲಾಗುತ್ತಿತ್ತು. ಆದರೆ ಕಳೆದ ಹಲವು ದಿನಗಳಿಂದ ಪ್ರವಾಸಿ ತಾಣಗಳು ಸಂಪೂರ್ಣ ಬಂದ್ ಆಗಿರುವುದರಿಂದ ಆದಾಯವಿಲ್ಲದೆ ಗ್ರಾಮ ಅರಣ್ಯ ಸಮಿತಿಗಳ (VFC) ಖಜಾನೆ ಖಾಲಿಯಾಗಿದೆ. ಪರಿಣಾಮವಾಗಿ, ಪ್ರವಾಸಿ ತಾಣಗಳನ್ನು ಕಾಯುವ ಕಾವಲುಗಾರರಿಗೆ ಸಂಬಳ ನೀಡಲು ಸಮಿತಿಗಳ ಬಳಿ ಹಣವಿಲ್ಲದಂತಾಗಿದೆ.

ಆತಂಕದಲ್ಲಿ ಸ್ಥಳೀಯ ಸಮಿತಿಗಳು:
ಒಂದು ವೇಳೆ ಸಂಬಳವಿಲ್ಲದೆ ಕಾವಲುಗಾರರು ಕೆಲಸ ನಿಲ್ಲಿಸಿದರೆ, ಕದ್ದುಮುಚ್ಚಿ ಪ್ರವಾಸಿ ತಾಣಗಳಿಗೆ ನುಗ್ಗುವ ಪ್ರವಾಸಿಗರ ಆಟಾಟೋಪ ಹಾಗೂ ಹುಚ್ಚಾಟಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸರ್ಕಾರ ಮತ್ತು ಅಧಿಕಾರಿಗಳು ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ, ವಾಸ್ತವದಲ್ಲಿ ಮಳೆ ಕಡಿಮೆಯಾದರೂ ನಿಷೇಧ ತೆರವುಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಸ್ಥಳೀಯ ವ್ಯಾಪಾರಿಗಳು ಮತ್ತು ಗ್ರಾಮ ಅರಣ್ಯ ಸಮಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಗಮನ ಹರಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರವಾಸಿ ತಾಣಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಆದಾಯವಿಲ್ಲ. ಕಷ್ಟಪಟ್ಟು ಗೇಟ್ ಕಾಯುವ ಸಿಬ್ಬಂದಿಗಳ ಸಂಬಳ ನೀಡುತ್ತಿದ್ದೇವೆ. ಒಂದು ವೇಳೆ ಕಾವಲುಗಾರ ಇಲ್ಲದಿದ್ದರೆ ಹೆಳದೆ ಕೇಳದೆ ಪ್ರವಾಸಿಗರು ಹೋಗುದರ ಜೊತೆಗೆ ಅಪಾಯಕಾರಿಯಾಗಿ ವರ್ತಿಸುತ್ತಾರೆ. ಏನಾದರೂ ಪ್ರಾಣ ಹಾನಿ ಆದರೆ ಅಂತ ಕಾಲವುಗಾರನೂ ಕಾವಲು ಕಾಯುತ್ತಿದ್ದಾನೆ.

ಗಣಪತಿ ಗಾಂವ್ಕರ್ ಕಾನೂರ( ಸ್ಥಳಿಯ ವಿ ಎಫ್ ಸಿ ಅಧ್ಯಕ್ಷರು)

Leave a Reply

Your email address will not be published. Required fields are marked *