
ಬೆಂಗಳೂರು : ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಾದ ಕಸ್ತೂರಿ ರಂಗನ್ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡಬಾರದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ವಿಧಾನಸಭೆಯಲ್ಲಿ ಬಲವಾಗಿ ಒತ್ತಾಯಿಸಿದರು.
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರದಿಯಲ್ಲಿನ ದೋಷಗಳನ್ನು ಅಂಕಿ-ಅಂಶಗಳ ಸಮೇತ ಸದನದ ಗಮನಕ್ಕೆ ತಂದರು.
೨೨೦ ಹಳ್ಳಿಗಳು ಸೂಕ್ಷ್ಮ ವಲಯಕ್ಕೆ:
“ಉತ್ತರ ಕನ್ನಡ ಜಿಲ್ಲೆಯ ಒಟ್ಟು 604 ಹಳ್ಳಿಗಳು ಹಾಗೂ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ 45 ಪಂಚಾಯತ್ ವ್ಯಾಪ್ತಿಯ ಸುಮಾರು 220 ಹಳ್ಳಿಗಳು ಈ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ (ESA) ವ್ಯಾಪ್ತಿಗೆ ಒಳಪಡುತ್ತವೆ. ಇಲಾಖೆಯು ಎಷ್ಟು ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿದೆ ಎಂದರೆ, ಸಂಪೂರ್ಣ ಬಯಲು ಸೀಮೆ ಪ್ರದೇಶಕ್ಕೆ ಒಳಪಡುವ ಬಿಸಿಲುಕೊಪ್ಪ ಪಂಚಾಯತ್ ಅನ್ನು ಸಹ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಲಾಗಿದೆ” ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲೆಯ ಜನರ ತ್ಯಾಗ ಅನನ್ಯ:
ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯನ್ನು ವಿವರಿಸಿದ ಅವರು, “ನಮ್ಮ ಜಿಲ್ಲೆಯಲ್ಲಿ ಬೆಡ್ತಿ, ಅಘನಾಶಿನಿ ನದಿಗಳಿದ್ದು, ಒಟ್ಟು ಶೇಕಡಾ 82ರಷ್ಟು ಅರಣ್ಯ ಪ್ರದೇಶವಿದೆ. ಕೇವಲ ಶೇಕಡಾ 18ರಷ್ಟು ಜಾಗದಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ. ಜಿಲ್ಲೆಯ ಜನರು ಅತ್ಯಂತ ಸಹನಶೀಲರಾಗಿದ್ದು, ದೇಶದ ಅಭಿವೃದ್ಧಿಗಾಗಿ ಕೈಗಾ ಅಣು ವಿದ್ಯುತ್ ಯೋಜನೆ ಹಾಗೂ ಸೀ ಬರ್ಡ್ ನೌಕಾನೆಲೆಯಂತಹ ಬೃಹತ್ ಯೋಜನೆಗಳಿಗೆ ಈಗಾಗಲೇ ತಮ್ಮ ಭೂಮಿಯನ್ನು ನೀಡಿ ಸಹಕರಿಸಿದ್ದಾರೆ” ಎಂದು ನೆನಪಿಸಿದರು.
ಬದುಕು ದುಸ್ತರವಾಗುವ ಭೀತಿ:
ಈಗಾಗಲೇ ಅರಣ್ಯ ಕಾಯ್ದೆಗಳ ಮಧ್ಯೆ ಬದುಕುತ್ತಿರುವ ಜನರಿಗೆ ಕಸ್ತೂರಿ ರಂಗನ್ ವರದಿಯು ಮತ್ತೊಂದು ದೊಡ್ಡ ಹೊಡೆತವಾಗಲಿದೆ. ಒಂದು ವೇಳೆ ಈ ವರದಿ ಜಾರಿಯಾದರೆ ಮಲೆನಾಡು ಮತ್ತು ಕರಾವಳಿ ಭಾಗದ ಜನರ ಜೀವನ ಸಂಪೂರ್ಣ ದುಸ್ತರವಾಗಲಿದೆ. ಆದ್ದರಿಂದ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೇ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಭೀಮಣ್ಣ ನಾಯ್ಕ್ ಅವರು ಸರ್ಕಾರವನ್ನು ಆಗ್ರಹಿಸಿದರು.















Leave a Reply