ರಸ್ತೆಯಲ್ಲಿ ಓಡಾಡೋದು ಸಾಹಸ, ಮನೆ ತೆರಿಗೆ ಕಟ್ಟೋದು ದುಸ್ಸಾಹಸ: ಸರ್ಕಾರದ ನೀತಿಗಳ ವಿರುದ್ಧ ಮಲವಳ್ಳಿಯಲ್ಲಿ ಬಿಜೆಪಿ  ಪ್ರತಿಭಟನೆ!

ಹಂಚಿಕೊಳ್ಳಿ

ಯಲ್ಲಾಪುರ: ಸರ್ಕಾರಿ, ಅರಣ್ಯ, ಅತಿಕ್ರಮಣ ಭೂಮಿಯಲ್ಲಿರುವ ಕಟ್ಟಡ ಮತ್ತು ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ರಾಜ್ಯ ಸರ್ಕಾರದ ಜನವಿರೋಧಿ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಹೊಂಡಮಯ ರಸ್ತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲದ ಮಾವಿನಮನೆ ಶಕ್ತಿಕೇಂದ್ರದ ವತಿಯಿಂದ ಸೋಮವಾರ ಮಾವಿನಮನೆ ಗ್ರಾಮ ಪಂಚಾಯತ್ ಆವರಣದಲ್ಲಿ ಬೃಹತ್ ಜನಾಂದೋಲನ ಪ್ರತಿಭಟನೆ ನಡೆಯಿತು.


‘ನಮ್ಮ ಮನೆ-ನಮ್ಮ ಹಕ್ಕು’ ಜನಾಂದೋಲನದ ಭಾಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು‌ ‌.


ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಆದೇಶದಿಂದಾಗಿ ಸರ್ಕಾರಿ ಭೂಮಿಯಲ್ಲಿ ಅನಿವಾರ್ಯವಾಗಿ ಮನೆಗಳನ್ನು ನಿರ್ಮಿಸಿಕೊಂಡು ಸುಮಾರು ದಶಕಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳು ಮನೆ ತೆರಿಗೆಯನ್ನೂ ಕಟ್ಟಲಾಗದಂತಹ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಇದು ಬಡವರ ಬದುಕಿಗೆ ಮಾರಕವಾಗಿದ್ದು, ತಕ್ಷಣವೇ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದರು. ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ ಮನುಷ್ಯನ ಮೂಲಭೂತ ಹಕ್ಕುಗಳಲ್ಲಿ ನೀರು, ವಸತಿ , ಆರೋಗ್ಯ , ರಸ್ತೆ ಸೇರಿದಂತೆ ಯಾವ ಸೌಕರ್ಯಗಳನ್ನು ನಾಚಿಕೆಗೆಡಿನ ಕಾಂಗ್ರೆಸ್ ಸರ್ಕಾರ ಜನರಿಗೆ ಸಮರ್ಪಕವಾಗಿ ನೀಡಿಲ್ಲ. ಇನ್ನು ಜನರು ತಮ್ಮ ಸ್ವಂತ ದುಡಿಮೆಯೊಂದಿಗೆ ಮನೆ ನಿರ್ಮಿಸಿಕೊಂಡರು ಅದಕ್ಕೂ ಈಗ ಸಂಚಾಕಾರ ಬಂದಿದೆ. ನಾವೆಲ್ಲರೂ ಈಗ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಭಾಗ್ವತ್ ಮಾತನಾಡಿ ಮಲವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹೊಂಡ ಬಿದ್ದು ಸಂಚಾರಕ್ಕೆ ಅಯೋಗ್ಯವಾಗಿವೆ. ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕಾ ಉಪಾಧ್ಯಕ್ಷ ಸುಬ್ಬಣ್ಣ ಬೊಳ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಾವಿನಮನೆ ಪಂಚಾಯತದಲ್ಲಿ ಹಿಂದುಳಿದ ವರ್ಗಗಳ ಜನರು ಬಹುತೇಕರು ವಾಸಕ್ಕೆ ಅರಣ್ಯ ಅತಿಕ್ರಮಣವನ್ನು ಸುಮಾರು ೪೦-೫೦ ವರ್ಷಗಳಿಗಿಂತಲೂ ಮೊದಲು ಮಾಡಿಕೊಂಡಿದ್ದಾರೆ. ಅವರಿಗೆ ಯಾವುದೋ ಕಾರಣದಿಂದ ಭೂಮಿ ಮಂಜೂರಾತಿ ದೊರಕಿಲ್ಲ‌. ಆದರೆ ಅವರ ಬಳಿ ಮನೆ ನಂಬರ್ ಇದೆ. ಈ ಅವೈಜ್ಞಾನಿಕ ಆದೇಶದಿಂದ ಅವರು ಬಿದಿಗೆ ಬೀಳುತ್ತಾರೆ. ಜನರನ್ನು ಉದ್ದಾರ ಮಾಡುತ್ತೆನೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಜನರನ್ನು ಬಿದಿಗೆ ಬಿಳುವಂತೆ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ರಸ್ಮಾ ಕುಣಬಿ ಹಾಗೂ ನಾರಾಯಣ ಕುಣಬಿ ಮಾತನಾಡಿ ನಾವೆಲ್ಲರು ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದರು.
ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸರ್ಕಾರದ ಬೇಜವಾಬ್ದಾರಿ ನಿರ್ಧಾರದಿಂದ ಜನರಿಗೆ ಆಗುವ ಅನ್ಯಾಯದ ಬಗ್ಗೆ ಗ್ರಾ.ಪಂ. ಪಿ ಡಿ.ಓ.ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಬೃಹತ್ ಆಂದೋಲನದಲ್ಲಿ ಪ್ರಮುಖರಾದ , ರವಿ ಹುಳ್ಸೆ, ಪ್ರಸನ್ನ ಗಾಂವ್ಕರ್, ವಿ ಪಿ ಹೆಬ್ಬಾರ್, ರಸ್ಮಾಕುಣಬಿ, ಗಣಪತಿ ಗಾಂವ್ಕರ್ ನೆಲೆಪಾಲ, ಗಣಪತಿ ಗಾಂವ್ಕರ್ ಕಾನೂರ, ಉಮಾಶಂಕರ ಮರಾಠಿ ಸೇರಿದಂತೆ ನೂರಾರು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *