ಹೋಳಿಹೊಳೆಯಲ್ಲಿ ಧಾರ್ಮಿಕ ಸಂಭ್ರಮ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದ ಅನಂತಮೂರ್ತಿ ಹೆಗಡೆ ಬಳಗ!!!!

ಹಂಚಿಕೊಳ್ಳಿ

ಶಿರಸಿ/ ಬೈಂದೂರು: ಇಲ್ಲಿನ ಪ್ರಸಿದ್ಧ ಹೋಳಿಹೊಳೆಯ ಶ್ರೀ ಬಿಳಿಸೆಲೆ ವಿನಾಯಕ ದೇವಸ್ಥಾನದ ಪವಿತ್ರ ಆವರಣದಲ್ಲಿ ಪರಮಪೂಜ್ಯ ಮಹಾ ಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳವರ ಚಾತುರ್ಮಾಸ್ಯ ವೃತಾಚರಣೆ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿಗಳಿಂದ ಜರುಗುತ್ತಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಹಾಗೂ ಶಿರಸಿ, ಸಿದ್ದಾಪುರ ಹಾಗೂ ಬನವಾಸಿ ಭಾಗದ ನೂರಾರು ಭಕ್ತಾದಿಗಳೊಂದಿಗೆ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಅನಂತಮೂರ್ತಿ ಹೆಗಡೆಯವರು ಶ್ರೀಗಳ ಪಾದಪೂಜೆಯನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಿ, ಲೋಕಕಲ್ಯಾಣಕ್ಕಾಗಿ ಮಹಾಸಂಕಲ್ಪ ಮಾಡಿದರು. ಬಳಿಕ ಪೂಜ್ಯ ಸ್ವಾಮೀಜಿಗಳವರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರ ದಿವ್ಯ ಮಾರ್ಗದರ್ಶನ ಹಾಗೂ ಮಂತ್ರಾಕ್ಷತೆಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.

ಈ ಧಾರ್ಮಿಕ ವಿಧಿಯ ಸಂದರ್ಭದಲ್ಲಿ ಬನವಾಸಿ ಬಿಜೆಪಿ ಮಂಡಲಾಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ, ಉಪಾಧ್ಯಕ್ಷರಾದ ರಾಘವೇಂದ್ರ ನಾಯ್ಕ ಬದನಗೋಡು, ಪ್ರಮುಖರಾದ ಶಿನಾ ಪೂಜಾರಿ ಗೇರುಮನೆ, ವೇಣು ಗೋಪಾಲ ಹೆಗಡೆ, ಪ್ರವೀಣ ಹೆಗಡೆ ಹಾಗೂ ಸಿದ್ದಾಪುರದ ವಿನಾಯಕ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಐಸೂರು, ಪ್ರಜೋತ, ನವೀನ ನಾಯ್ಕ ಸೇರಿದಂತೆ ಹಿತೈಷಿಗಳು ಉಪಸ್ಥಿತರಿದ್ದು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಚಾತುರ್ಮಾಸ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಗಂಟಿಹೊಳಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಧನ್ಯತಾ ಭಾವ ಮೂಡಿಸಿದೆ:
ಪಾದಪೂಜೆಯ ಬಳಿಕ ಮಾತನಾಡಿದ ಅನಂತಮೂರ್ತಿ ಹೆಗಡೆಯವರು, “ಚಾತುರ್ಮಾಸ್ಯ ವ್ರತಾಚರಣೆಯಂತಹ ಪರಮ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮ ಕ್ಷೇತ್ರದ ಭಕ್ತಾಭಿಮಾನಿಗಳು ಹಾಗೂ ಆತ್ಮೀಯರೊಂದಿಗೆ ಪಾಲ್ಗೊಳ್ಳಲು ಸಿಕ್ಕಿರುವುದು ನನ್ನ ಸೌಭಾಗ್ಯ. ಶ್ರೀಗಳ ದಿವ್ಯ ಆಶೀರ್ವಾದ ಪಡೆಯುವ ಮೂಲಕ ನನ್ನಲ್ಲಿ ಧನ್ಯತಾ ಭಾವ ಮೂಡಿದೆ. ಪೂಜ್ಯ ಗುರುಗಳ ಕೃಪೆ ಮತ್ತು ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ” ಎಂದು ಪ್ರಾರ್ಥಿಸಿದರು.


Leave a Reply

Your email address will not be published. Required fields are marked *