ಪ್ಲ್ಯಾನಿಂಗ್ ಇಂಟರ್ನ್ಯಾಷನಲ್, ಪರ್ಫಾಮೆನ್ಸ್ ಲೋಕಲ್: 60 ಸಿಸಿಟಿವಿಯಲ್ಲಿ ಭರ್ಜರಿ ಶೂಟಿಂಗ್! ಎರ್ಟಿಗಾ ಕಾರಿನಲ್ಲಿ ಹಸು ಕದ್ದವನಿಗೆ ಠಾಣೆಗೆ ಕರೆತಂದು ಭರ್ಜರಿ ಆತಿಥ್ಯ!!!!

ಹಂಚಿಕೊಳ್ಳಿ

ಕುಮಟಾ: ರಸ್ತೆ ಬದಿಯಲ್ಲಿ ವಿಶ್ರಮಿಸುತ್ತಿದ್ದ ಜಾನುವಾರನ್ನು ಕಾರಿನಲ್ಲಿ ತುಂಬಿಕೊಂಡು ಕದ್ದೊಯ್ದಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಕುಮಟಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಮೂಲದ ಮಹಮ್ಮದ್ ಶಬೀರ್ (30 ವರ್ಷ) ಬಂಧಿತ ಆರೋಪಿ. ಈತನಿಂದ ಕಳ್ಳತನಕ್ಕೆ ಬಳಸಲಾಗಿದ್ದ ಮಾರುತಿ ಎರ್ಟಿಗಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ:
ಸೆಪ್ಟೆಂಬರ್ 10ರ ಮುಂಜಾನೆ ಸುಮಾರು 2:14 ರ ಸುಮಾರಿಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಕಳ್ಳರ ತಂಡ, ಕುಮಟಾ ಪಟ್ಟಣದ ರೈಸ್ ಮಿಲ್ ಬಳಿ ಮಲಗಿದ್ದ ದನವನ್ನು ಬಲವಂತವಾಗಿ ಕಾರಿನೊಳಗೆ ಹಾಕಿಕೊಂಡು ಪರಾರಿಯಾಗಿತ್ತು. ಈ ಕೃತ್ಯದ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

60ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ:
ಪ್ರಕರಣದ ಪತ್ತೆಗಾಗಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಕಳ್ಳರ ಪತ್ತೆಗಾಗಿ ಪೊಲೀಸರು ಹಗಲಿರುಳು ಶ್ರಮಿಸಿದ್ದು, ಮಾರ್ಗ ಮಧ್ಯದ ಸುಮಾರು 60ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ಕೊನೆಗೆ ತಾಂತ್ರಿಕ ಆಧಾರಗಳ ನೆರವಿನಿಂದ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆಯಲ್ಲಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು, ಅಲ್ಲಿಗೆ ತೆರಳಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಪೊಲೀಸ್ ತಂಡಕ್ಕೆ ಪ್ರಶಂಸೆ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ. ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತ ಅವರ ನೇರ ಉಸ್ತುವಾರಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ., ಉಪನಿರೀಕ್ಷಕರಾದ ಖಾದರ್ ಬಾಷಾ, ರವಿ ಗುಡ್ಡಿ, ವಿಠಲ ಮಲವಡಕರ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯ್ಕ, ಕಿರಣ ನಾಯ್ಕ ಮತ್ತು ಉಡುಪಿ ಜಿಲ್ಲೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಈ ಯಶಸ್ವಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.


Leave a Reply

Your email address will not be published. Required fields are marked *