
ಅಂಕೋಲಾ; ತಾಲೂಕಿನ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ಸಂಘದ ಸಭಾಭವನದಲ್ಲಿ ಗುರುವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ “ಪ್ರಸಕ್ತ ಸಾಲಿನಲ್ಲಿ ನಮ್ಮ ಸಂಘವು ₹51.93 ಲಕ್ಷ ಲಾಭ ಗಳಿಸಿದೆ. ಇದಕ್ಕೆ ಸದಸ್ಯರ ನಿರಂತರ ಸಹಕಾರವೇ ಕಾರಣ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಡಿವಿಡೆಂಡ್ (ಲಾಭಾಂಶ) ನೀಡಲಾಗುತ್ತಿದೆ” ಎಂದು ಹೇಳಿದರು. ಇದೇ ವೇಳೆ ಅವರು ಸಂಘದ ಮುಖ್ಯ ಕಛೇರಿ ಹಾಗೂ ಹಳವಳ್ಳಿ ಶಾಖೆಯಲ್ಲಿ ಸದಸ್ಯರಿಗೆ ಕಲ್ಪಿಸಲಾಗಿರುವ ವಿವಿಧ ಸವಲತ್ತುಗಳ ಕುರಿತು ಮಾಹಿತಿ ನೀಡಿ, ಮುಂದೆಯೂ ಸದಸ್ಯರ ಸಹಕಾರ ಹೀಗೆಯೇ ಇರಲಿ ಎಂದು ಕೋರಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಕಾರ್ತಿಕ್ ಭಟ್ಟ ಸಂಘದ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿದರು.
ಮಹಾನ್ ಚೇತನಗಳ ಜನ್ಮ ಶತಾಬ್ಧಿ ಆಚರಣೆ:
ಇದೇ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಹಾಗೂ ಸಹಕಾರಿ ರಂಗಕ್ಕೆ ಹೊಸ ಭಾಷ್ಯ ಬರೆದ ಮಹಾನ್ ಚೇತನಗಳಾದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಹಾಗೂ ಹಿರಿಯ ಸಹಕಾರಿಗಳಾದ ದಿವಂಗತ ಶ್ರೀಪಾದ ಹೆಗಡೆ ಕಡವೆ ಅವರ ಜನ್ಮ ಶತಾಬ್ಧಿ ಪ್ರಯುಕ್ತ ಜನ್ಮ ಶತಮಾನೋತ್ಸವ ಪ್ರಯುಕ್ತ ಸಂಘದ ಸಭಾಂಗಣದಲ್ಲಿ ಈ ಇಬ್ಬರೂ ಧೀಮಂತ ನಾಯಕರ ಫೋಟೊವನ್ನು ಅನಾವರಣಗೊಳಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಂಶುಪಾಲರು ಹಾಗೂ ಖ್ಯಾತ ತಾಳಮದ್ದಲೆ ಕಲಾವಿದರಾದ ಎಂ. ಎನ್. ಹೆಗಡೆ ಹಳವಳ್ಳಿ ಅವರು ಮಾತನಾಡಿ, ರಾಮಕೃಷ್ಣ ಹೆಗಡೆ ಮತ್ತು ಶ್ರೀಪಾದ ಹೆಗಡೆಯವರ ಸಾಧನೆ, ಆದರ್ಶ ಹಾಗೂ ಅವರ ಉನ್ನತ ವಿಚಾರಧಾರೆಗಳನ್ನು ಸಭೆಯ ಮುಂದೆ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಗಜಾನನ ಹೆಗಡೆ ಸ್ವಾಗತಿಸಿದರು. ನಿರ್ದೇಶಕರಾದ ಆನಂದ ನಾಯ್ಕ ವಂದಿಸಿದರು. ಸಭೆಯಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಮಾಜಿ ಅಧ್ಯಕ್ಷರುಗಳು ಹಾಗೂ ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.
















Leave a Reply