ಶಿರಸಿ–ಹಾವೇರಿ ಹೆದ್ದಾರಿಗೆ ವೇಗ; ಮಾರ್ಚ್‌ಗೆ ಡೆಡ್‌ಲೈನ್

ಹಂಚಿಕೊಳ್ಳಿ

ಶಿರಸಿ: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಅಕ್ಟೋಬರ್ ತಿಂಗಳಿನಿಂದಲೇ ಕೈಗೆತ್ತಿಕೊಳ್ಳಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಸೋಮವಾರ ಸಂಸದರ ಕಾರ್ಯಾಲಯದಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ರಸ್ತೆ ಕಳೆದ ವರ್ಷ ಸಂಪೂರ್ಣ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದ್ದದ್ದು ನಿಜ. ಆದರೆ, ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಆರ್‌ಎನ್‌ಎಸ್ ಹಾಗೂ ಅಮ್ಮಾಪುರ ಕನ್‌ಸ್ಟ್ರಕ್ಷನ್ ವಿವಿಧ ಹಂತದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಿವೆ ಎಂದರು.

ರಸ್ತೆ ಕಾಮಗಾರಿಗೆ ಕೆಲವು ಸಮಸ್ಯೆಗಳೂ ಇವೆ. ನಗರ ಭಾಗದಲ್ಲಿ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಜಾಗವನ್ನು ತೆರವುಗೊಳಿಸಿಕೊಡುವ ಕೆಲಸ ತುರ್ತಾಗಿ ಆಗಬೇಕಿದೆ. ಸುಮಾರು 110 ಕಡೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಭೂಮಿಯನ್ನು ಹೆದ್ದಾರಿ ಸಲುವಾಗಿ ಬಿಟ್ಟುಕೊಡಬೇಕಾಗುತ್ತದೆ. ಕೆಲವಷ್ಟು ಆಸ್ತಿ ತೆರವಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಉಪವಿಭಾಗಾಧಿಕಾರಿ ಕಚೇರಿಯಿಂದ ಇನ್ನೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಬೇಕಾಗಿದೆ ಎಂದು ತಿಳಿಸಿದರು.

ಶಿರಸಿ-ಕುಮಟಾ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ತಾಲೂಕಿನ ಹಾರುಗಾರ ಬಳಿ ಸೇತುವೆ ನಿರ್ಮಾಣದಂತಹ ಕಾಮಗಾರಿ ಹಾಗೂ ಸಂಪಖಂಡ ಸಮೀಪದ ಗದ್ದೆಮನೆ ಬಳಿ ರಸ್ತೆ ನಿರ್ಮಾಣ ಮಾತ್ರ ಬಾಕಿ ಇದೆ. ಹೀಗಾಗಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಿರಸಿಯಲ್ಲಿಯೇ ವಾಸ್ತವ್ಯ ಮಾಡಿ ಶಿರಸಿ-ಹಾವೇರಿ ರಸ್ತೆ ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಿದ್ದೇನೆ ಎಂದರು.

ಶಿರಸಿ-ಹಾವೇರಿ ರಸ್ತೆಯಲ್ಲಿ ಆರ್‌ಎನ್‌ಎಸ್ ಸಂಸ್ಥೆಯು 21 ಕಿ.ಮೀ.ನಷ್ಟು ರಸ್ತೆ ಕಾಮಗಾರಿ ಮಾಡಲಿದೆ. ಇದರೊಂದಿಗೆ ರಸ್ತೆ ವಿಸ್ತರಣೆ ಹಾಗೂ ಒಂದು ಸೇತುವೆಯನ್ನೂ ನಿರ್ಮಿಸಲಿದೆ. ಅಮ್ಮಾಪುರ ಕನ್‌ಸ್ಟ್ರಕ್ಷನ್ ಸಂಸ್ಥೆಯು 8.4 ಕಿ.ಮೀ.ನಷ್ಟು ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. ಈ ಎರಡೂ ಕಂಪೆನಿಗಳು ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಮಳೆಗಾಲದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಳ್ಳಬೇಕೆಂದರೆ ಜಿಲ್ಲಾಡಳಿತ, ಹೆಸ್ಕಾಂ, ನಗರಸಭೆ ಮತ್ತು ಸ್ಥಳೀಯ ಆಡಳಿತದ ಸಹಕಾರ ಅತ್ಯಗತ್ಯ. ಶಿರಸಿಯ ಅಗಸೇಬಾಗಿಲಿನಿಂದ ಐದು ರಸ್ತೆ ಮೂಲಕ ಹುಬ್ಬಳ್ಳಿ ರಸ್ತೆವರೆಗೆ ಅನೇಕ ಕಡೆಗಳಲ್ಲಿ ತೆರವು ಕಾರ್ಯ ನಡೆಯಬೇಕಿದ್ದು, ಸಂಬಂಧಪಟ್ಟವರು ತಕ್ಷಣ ಸ್ಪಂದಿಸಿ ಸಹಕಾರ ನೀಡಬೇಕು. ಎಲ್ಲ ಹಂತದ ಅಧಿಕಾರಿಗಳು ಎಷ್ಟು ಸಹಕಾರ ನೀಡುತ್ತಾರೆ ಎಂಬುದು ಅತಿ ಮುಖ್ಯ ಎಂದರು.

ಕೋಟೆಕೆರೆಯಿಂದ ಚಿಪಗಿವರೆಗೆ ರಸ್ತೆ ಅಗಲವಿದ್ದರೂ ಅತಿಕ್ರಮಣ ತೆರವುಪಡಿಸಬೇಕಾದ ಅಗತ್ಯವಿದೆ. ಅರಣ್ಯ ಇಲಾಖೆಯಿಂದ ಈಗ ಎಲ್ಲ ಹಂತದ ಕ್ಲಿಯರೆನ್ಸ್ ಸಿಕ್ಕಿದೆ. ಭಟ್ಕಳದಿಂದ ಕಾರವಾರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 20 ಸ್ಥಳಗಳಲ್ಲಿ ಬೇರೆ ಬೇರೆ ಹಂತದ ಸಮಸ್ಯೆಗಳಿವೆ. ಪ್ರತಿ ಸ್ಥಳದ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದ್ದೇವೆ ಎಂದರು.

ತಾಲೂಕಿನ ಬಿಸಲಕೊಪ್ಪದಿಂದ ತಡಸ್‌ವರೆಗಿನ 65 ಕಿ.ಮೀ. ಹುಬ್ಬಳ್ಳಿ ಮಾರ್ಗ ಸಂಪೂರ್ಣ ಶಿಥಿಲಗೊಂಡಿದೆ. ಈ ರಸ್ತೆಯನ್ನೂ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂಬ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಪ್ರಸ್ತಾಪಿಸಿದ್ದೇನೆ. ಆದರೆ, ಅದಕ್ಕೆ ಸಮಯ ಹಿಡಿಯುವ ಕಾರಣ ಅಲ್ಲಿಯವರೆಗೂ ರಾಜ್ಯ ಸರ್ಕಾರ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಶಿರಸಿಯಿಂದ ಹುಬ್ಬಳ್ಳಿವರೆಗೆ ವಾಹನ ದಟ್ಟಣೆಯೂ ಹೆಚ್ಚಿರುವ ಕಾರಣ ರಾಜ್ಯ ಸರ್ಕಾರ ಈ ರಸ್ತೆ ಸ್ಥಿತಿಯ ಬಗ್ಗೆ ಗಮನಹರಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Leave a Reply

Your email address will not be published. Required fields are marked *