
ಯಲ್ಲಾಪುರ: ನಿವೃತ್ತ ಹಿರಿಯ ಪಶುವೈದ್ಯ ಪರಿವೀಕ್ಷಕ ಕೆ.ಜಿ. ಹೆಗಡೆ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ರೈತರು ಹಾಗೂ ಜಾನುವಾರುಗಳ ಹಿತಕ್ಕಾಗಿ ನಿಷ್ಠೆಯಿಂದ ಶ್ರಮಿಸಿದ್ದಾರೆ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ” ಎಂದು ಶಾಸಕ ಶಿವರಾಮ ಹೆಬ್ಬಾರ್ ಶುಭ ಹಾರೈಸಿದರು.
ವಜ್ರಳ್ಳಿಯ ಸರ್ವೋದಯ ಸಭಾಭವನದಲ್ಲಿ ರವಿವಾರ ನಾಗರಿಕರು, ರೈತರು ಹಾಗೂ ವಿವಿಧ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಾಗರಿಕ ಸನ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಶುಪಾಲನಾ ಕ್ಷೇತ್ರದಲ್ಲಿ ಕೆ.ಜಿ. ಹೆಗಡೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಹೆಬ್ಬಾರ್, ರೈತರಿಗೆ ಹಾಗೂ ಜಾನುವಾರು ಸಾಕಾಣಿಕೆದಾರರಿಗೆ ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ. ಒಬ್ಬ ಅಧಿಕಾರಿ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಎಷ್ಟು ಜನರನ್ನು ಗಳಿಸಲು ಸಾಧ್ಯ ಎಂಬುದನ್ನು ಕೆ ಜಿ ಹೆಗಡೆಯವರು ತೋರಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಹಿರಿಯ ಪಶುವೈದ್ಯ ಕೆ.ಜಿ. ಹೆಗಡೆ ಅವರನ್ನು ಸಮಸ್ತ ನಾಗರಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ರೈತರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಜ್ರಳ್ಳಿ , ಮಾವಿನಮನೆ ಪಂಚಾಯತ ಜನರು ನನ್ನನ್ನು ಮನೆ ಮಗನಂತೆ ನೋಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶಚಂದ್ರ ಹೆಗಡೆ ಕೇಶಿನ್ಮನೆ ಮಾತನಾಡಿ ಈ ಭಾಗದಲ್ಲಿ ಹೈನೊದ್ಯಮ ಈ ಪ್ರಮಾಣವಾಗಿ ಬೆಳೆಯಲು ಕೆ ಜಿ ಹೆಗಡೆಯವರೆ ಪರೋಕ್ಷ ಕಾರಣ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಪಶು ಇಲಾಖೆಯ ಸುಬ್ರಾಯ ಭಟ್, ವಿಶ್ವದರ್ಶನ ಶಿಕ್ಷಣ ಸಮಿತಿ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ವಜ್ರಳ್ಳಿ ಸರ್ವೋದಯ ಶಿಕ್ಷಣ ಸಮಿತಿ ಅಧ್ಯಕ್ಷ ಡಿ. ಶಂಕರ ಭಟ್, ವಜ್ರಳ್ಳಿ ,ಮಾವಿನಮನೆ ಪಂಚಾಯತ ವ್ಯಾಪ್ತಿಯ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

ಮಾವಿನಮನೆ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ ಸ್ವಾಗತಿಸಿದರು. ಸಹ್ಯಾದ್ರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಕಾರಿ ಧುರಿಣ ನಾಗೇಂದ್ರ ಭಟ್ ನೆಡಿಗೆಮನೆ ಸನ್ಮಾನಪತ್ರ ವಾಚಿಸಿದರು.
ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ವಂದಿಸಿದರು. ಪತ್ರಕರ್ತ ದತ್ತಾತ್ರೇಯ ಕಣ್ಣಿಪಾಲ ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಣೆ ಮಾಡಿದರು. ವಿದ್ಯಾರ್ಥಿಗಳು ಉತ್ತಮವಾಗಿ ಸ್ವಾಗತ ಗೀತೆ ಹಾಡಿದರು. ಸಹಕಾರಿ ಸಂಘಗಳ ಪದಾಧಿಕಾರಿಗಳು, ರೈತರು ಮತ್ತು ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.















Leave a Reply