ನೆಲ, ಜಲ ಮತ್ತು ಸ್ವಾತಂತ್ರ್ಯಕ್ಕಾಗಿ ಸಮರ: ಬ್ರಿಟಿಷ್ ದಬ್ಬಾಳಿಕೆಯ ಅಡಿಪಾಯ ಅಲುಗಾಡಿಸಿದ್ದ ಉತ್ತರ ಕನ್ನಡದ ಜನಸಾಮಾನ್ಯರ ಕಥನ

ಹಂಚಿಕೊಳ್ಳಿ

ಉತ್ತರಕನ್ನಡ : ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿರುವಿ ಹಾಕಿದರೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯ ವಿರುದ್ಧ ಕರಾವಳಿ ಮತ್ತು ಮಲೆನಾಡಿನ ಸೀಮೆಯಲ್ಲಿ ನಡೆದ ಹೋರಾಟದ ಕಿಚ್ಚು ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತದೆ. ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಕರೆಗೆ ದೇಶದಲ್ಲೇ ಅತ್ಯಂತ ತೀವ್ರವಾಗಿ ಸ್ಪಂದಿಸಿದ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಮುಂಚೂಣಿಯಲ್ಲಿದೆ. ಅಂಕೋಲಾದ ಕಡಲತೀರದಿಂದ ಹಿಡಿದು ಸಿದ್ದಾಪುರದ ದಟ್ಟ ಕಾನನದವರೆಗೂ ಹರಡಿದ ಈ ಸ್ವಾತಂತ್ರ್ಯದ ಜ್ವಾಲೆ, ಬ್ರಿಟಿಷರ ನಿದ್ದೆಗೆಡಿಸಿದ್ದು ಅಷ್ಟೆ ಸತ್ಯ.

ಕರ್ನಾಟಕದ ಬಾರ್ದೋಲಿ’ಯಾದ ಅಂಕೋಲಾ!

೧೯೩೦ರ ಏಪ್ರಿಲ್ ೧೩ರಂದು ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಗಾಂಧೀಜಿಯವರ ದಂಡಿ ಯಾತ್ರೆಯಿಂದ ಪ್ರೇರಿತರಾದ ಜಿಲ್ಲೆಯ ಹಿರಿಯ ನಾಯಕರು ಅಂಕೋಲಾವನ್ನು ಉಪ್ಪಿನ ಸತ್ಯಾಗ್ರಹದ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡರು. ಅಂದು ಸಾವಿರಾರು ದೇಶಭಕ್ತರು ಬ್ರಿಟಿಷ್ ಕಾನೂನನ್ನು ಮುರಿದು ಬಹಿರಂಗವಾಗಿ ಉಪ್ಪು ತಯಾರಿಸಿದನ್ನು ನೆನೆಯಬಹುದು. ಇಡೀ ಸಮಾಜವೇ ಒಂದಾಗಿ ಪ್ರದರ್ಶಿಸಿದ ಈ ಅಪ್ರತಿಮ ಧೈರ್ಯವನ್ನು ಕಂಡು, ಅಂಕೋಲಾಕ್ಕೆ ‘ಕರ್ನಾಟಕದ ಬಾರ್ದೋಲಿ’ ಎಂಬ ಹೆಮ್ಮೆಯ ನಾಮಕರಣವಾಯಿತು.

ಬ್ರಿಟಿಷರ ಜಪ್ತಿಗೂ ಜಗ್ಗದ ಮಲೆನಾಡಿನ ರೈತರ ‘ಕರನಿರಾಕರಣೆ’

ಅಂಕೋಲಾದ ಉಪ್ಪಿನ ಸತ್ಯಾಗ್ರಹದ ಬೆನ್ನಲ್ಲೇ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಭಾಗಗಳಲ್ಲಿ ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟದ ‘ಕರನಿರಾಕರಣೆ ಚಳುವಳಿ’ ತೀವ್ರ ಸ್ವರೂಪ ಪಡೆದುಕೊಂಡಿತು. ರೈತರು ಕಂದಾಯ ಕಟ್ಟಲು ಕಡ್ಡಾಯವಾಗಿ ನಿರಾಕರಿಸಿದರು. ಇದರಿಂದ ಕೆರಳಿದ ಬ್ರಿಟಿಷ್ ಅಧಿಕಾರಿಗಳು ರೈತರ ಭೂಮಿ, ಮನೆ, ಪಾತ್ರೆ-ಪಗಡ ಹಾಗೂ ದನಕರುಗಳನ್ನು ಜಪ್ತಿ ಮಾಡಿ ಹರಾಜು ಹಾಕಿದರು.

ಆದರೂ ಮಣಿಯದ ನೂರಾರು ರೈತ ಕುಟುಂಬಗಳು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ದಟ್ಟ ಕಾಡುಗಳಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸಿದವೇ ಹೊರತು ಬ್ರಿಟಿಷರಿಗೆ ತಲೆಬಾಗಲಿಲ್ಲ. ಇವರ ಈ ತ್ಯಾಗ ಅಪ್ರತಿಮವಾದದ್ದು.

ಕಾಡಿನ ಹಕ್ಕು ರಕ್ಷಣೆಗೆ ‘ಜಂಗಲ್ ಸತ್ಯಾಗ್ರಹ’

ಜಿಲ್ಲೆಯ ಜೀವನಾಡಿಯಾದ ಅರಣ್ಯದ ಮೇಲೆ ಬ್ರಿಟಿಷರು ಕಠಿಣ ನಿಯಮಗಳನ್ನು ಹೇರಿ, ಸ್ಥಳೀಯರ ಹಕ್ಕುಗಳನ್ನು ಕಸಿದುಕೊಂಡಾಗ ಜಿಲ್ಲೆಯಲ್ಲಿ ‘ಜಂಗಲ್ ಸತ್ಯಾಗ್ರಹ’ (ಅರಣ್ಯ ಸತ್ಯಾಗ್ರಹ) ಭುಗಿಲೆದ್ದಿತು. ಮಲೆನಾಡಿನ ಹೆಮ್ಮೆಯ ಜನತೆ ಬ್ರಿಟಿಷರ ಕಾನೂನನ್ನು ಉಲ್ಲಂಘಿಸಿ ಕಾಡಿಗೆ ನುಗ್ಗಿ ಉರುವಲು ಮತ್ತು ಹುಲ್ಲನ್ನು ಕತ್ತರಿಸಿ ತಂದು ಬಹಿರಂಗ ಪ್ರತಿಭಟನೆ ನಡೆಸಿದರು. ಸರ್ಕಾರದ ದಂಡನೆ, ದೌರ್ಜನ್ಯಗಳಿಗೆ ಹೆದರದೆ ಅರಣ್ಯ ಹಕ್ಕಿಗಾಗಿ ಹೋರಾಡಿದರು.

ಸ್ವಾತಂತ್ರ್ಯ ಕದನದಲ್ಲಿ ಸಿಡಿದು ನಿಂತ ನಾರೀಶಕ್ತಿ!

ಉತ್ತರ ಕನ್ನಡದ ಚಳುವಳಿಯ ಮತ್ತೊಂದು ವಿಶೇಷವೆಂದರೆ ಮಹಿಳೆಯರ ಸಕ್ರಿಯ ಪಾತ್ರ. ವೀರ ಮಹಿಳೆ ಗೌರಮ್ಮ ವೆಂಕಟರಾಮಯ್ಯ ಹೆಗಡೆ (ಹೊಸಮನೆ ಗೌರಮ್ಮ) ಅವರ ನೇತೃತ್ವದಲ್ಲಿ ನೂರಾರು ಮಹಿಳೆಯರು ಜೈಲು ಸೇರಿದರು. ಬ್ರಿಟಿಷ್ ಪೊಲೀಸರು ಮನೆಗಳಿಗೆ ನುಗ್ಗಿ ದೌರ್ಜನ್ಯ ಎಸಗಿದಾಗಲೂ ಸಿದ್ದಾಪುರ ಮತ್ತು ಅಂಕೋಲಾದ ಧೀರ ಹೆಣ್ಣುಮಕ್ಕಳು ‘ವಂದೇ ಮಾತರಂ’ ಧ್ವಜವನ್ನು ಎತ್ತಿ ಹಿಡಿದು ವೀರಾವೇಶದಿಂದ ಹೋರಾಡಿದ್ದು ಇಂದಿಗೂ ರೋಮಾಂಚನ ಉಂಟುಮಾಡುತ್ತದೆ.

ಮುಂಚೂಣಿಯಲ್ಲಿದ್ದ ಧೀಮಂತ ನಾಯಕರು

ಟಿ.ಎಸ್. ನಾಯಕ್, ಶಂಕರ ರಾವ್ ಗುಲ್ವಾಡಿ, ಕೃಷ್ಣಪ್ಪ ಸುಬ್ರಾಯ ಹೆಗಡೆ ಮತ್ತು ಆರ್. ಆರ್. ದಿವಾಕರ್,  ಬರಬಳ್ಳಿಯ ಗಣಪತಿ ಭಟ್ (ಗುಡ್ಡೇಮನೆ)   ಅವರಂತಹ ದಕ್ಷ ನಾಯಕರ ಮಾರ್ಗದರ್ಶನದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಗೂ ದೇಶಪ್ರೇಮದ ಸಂದೇಶ ತಲುಪಿತು. ಕಾರವಾರ, ಕುಮಟಾ ಮತ್ತು ಭಟ್ಕಳ ಕರಾವಳಿಯಲ್ಲೂ ವಿದೇಶಿ ವಸ್ತುಗಳ ಬಹಿಷ್ಕಾರ ಹಾಗೂ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿ ಬ್ರಿಟಿಷ್ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಾಯಿತು.

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ, ಆಸ್ತಿ ಮತ್ತು ಸುಖ-ಸಂತೋಷಗಳನ್ನು ದಾನ ಮಾಡಿದ ಇಂತಹ ಧೀರರನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಕೇವಲ ಒಂದು ಪ್ರಾಂತ್ಯದ ಕಥೆಯಲ್ಲ; ಇದು ಭಾರತೀಯರ ಸ್ವಾಭಿಮಾನದ ಸಂಕೇತ. ಬ್ರಿಟಿಷ್ ಸಾಮ್ರಾಜ್ಯದ ಕ್ರೂರ ದಂಡನೆಗಳೆದುರು ಕೇವಲ ಸತ್ಯ ಮತ್ತು ಅಹಿಂಸೆಯ ಆಯುಧ ಹಿಡಿದು ಹೋರಾಡಿದ ಈ ನೆಲದ ವೀರರ ತ್ಯಾಗ ಇಂದಿನ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದೆ. ಅವರೆಲ್ಲ ಅಪ್ರತಿಮ ಹೋರಾಟದ ಫಲವಾಗಿ ಇವತ್ತು ಸ್ವಾತಂತ್ಯವನ್ನು ನಾವು ಅನುಭವಿಸುತ್ತಿದ್ದೆವೆ.  ಸರ್ವರಿಗೂ 80ನೇ ಸ್ವಾತಂತ್ರ ಉತ್ಸವದ ಶುಭಾಶಯಗಳನ್ನು “ಹಳ್ಳಿನ್ಯೂಸ್” ಕೋರುತ್ತದೆ.

Leave a Reply

Your email address will not be published. Required fields are marked *