ಮುಂಡಗೋಡು: ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಅಕ್ರಮವಾಗಿ ಜಿಂಕೆ ಮಾಂಸವನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸುಮಾರು 9 ಕೆಜಿ ಮಾಂಸವನ್ನು ಜಪ್ತಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಜುಲೈ 17 ರಂದು ಮುಂಡಗೋಡಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಈರೇಶ್ ಕಬ್ಬಿನ ಹಾಗೂ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ 9 ಕೆಜಿ ಅಕ್ರಮ ಜಿಂಕೆ ಮಾಂಸ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ರಮೇಶ್ ಚವ್ವಾಣ್ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿಯಾದ ಮುಂಡಗೋಡಿನ ವಸಂತ್ ಕೊರವರ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಜಾಲ ಬೀಸಿದ್ದಾರೆ.
ದಾಳಿಯ ಈ ಕಾರ್ಯಾಚರಣೆಯಲ್ಲಿ ಡಿಆರ್ಎಫ್ಒಗಳಾದ ಸುನೀತಾ ಬಿ.ಎಂ., ಮುತ್ತಣ್ಣ ಹುಂದ್ರಾಳ ಹಾಗೂ ಬೀಟ್ ಫಾರೆಸ್ಟರ್ಗಳಾದ ಅಮಿತ್ ಸಣ್ಣಕ್ಕಿ, ಹೇಮಾ ಕೂಸನೂರ್, ಮುಸ್ತಾಕ್ ಅಲಿ ಸೇರಿದಂತೆ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.











Leave a Reply