Instagram, Facebookಗೆ ಐರೋಪ್ಯ ಒಕ್ಕೂಟದ ಖಡಕ್ ಎಚ್ಚರಿಕೆ; ನಿಯಮ ಉಲ್ಲಂಘಿಸಿದರೆ ಭಾರಿ ದಂಡದ ಭೀತಿ!

​ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರು, ಅದರಲ್ಲೂ ವಿಶೇಷವಾಗಿ ಮಕ್ಕಳು ಈ ಸಾಮಾಜಿಕ ಜಾಲತಾಣಗಳಿಗೆ ಅತಿಯಾಗಿ ಅಂಟಿಕೊಳ್ಳುವಂತೆ (Addict) ಮಾಡುತ್ತಿವೆ ಎಂದು ಐರೋಪ್ಯ ಒಕ್ಕೂಟ (EU) ಗಂಭೀರ ಆರೋಪ ಮಾಡಿದೆ. ‘ಡಿಜಿಟಲ್ ಸರ್ವೀಸ್ ಆಕ್ಟ್’ (DSA) ಅಡಿಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆಸಲಾದ ಸುದೀರ್ಘ ತನಿಖೆಯ ನಂತರ ಒಕ್ಕೂಟವು ಮೆಟಾ ಒಡೆತನದ ಈ ಪ್ಲಾಟ್‌ಫಾರ್ಮ್‌ಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿನ ರೀಲ್ಸ್ (Reels) ಹಾಗೂ ಸ್ಟೋರಿಗಳು ಬಳಕೆದಾರರನ್ನು ಕಡ್ಡಾಯವಾಗಿ ಅದಕ್ಕೇ ಅಂಟಿಕೊಳ್ಳುವಂತೆ ಪ್ರಚೋದಿಸುತ್ತಿವೆ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿವೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಆಟೋ ಪ್ಲೇ, ಇನ್ಫಿನಿಟ್ ಸ್ಕ್ರೋಲ್ ನಿಲ್ಲಿಸಲು ಸೂಚನೆ

​ಮೆಟಾ ಜಾರಿಗೆ ತಂದಿರುವ ಟೈಮ್ ಮ್ಯಾನೇಜ್‌ಮೆಂಟ್ ಹಾಗೂ ಪೇರೆಂಟಲ್ ಕಂಟ್ರೋಲ್ ಟೂಲ್‌ಗಳು ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ ಎಂದು ಒಕ್ಕೂಟ ಟೀಕಿಸಿದೆ. ಈ ನಿಟ್ಟಿನಲ್ಲಿ, ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿರುವ ‘ಇನ್ಫಿನಿಟ್ ಸ್ಕ್ರೋಲ್’ (ನಿರಂತರವಾಗಿ ಸ್ಕ್ರೋಲ್ ಮಾಡುವುದು) ಮತ್ತು ವಿಡಿಯೋಗಳ ‘ಆಟೋ ಪ್ಲೇ’ ಆಯ್ಕೆಗಳನ್ನು ಡಿಫಾಲ್ಟ್ ಆಗಿ ಸ್ಥಗಿತಗೊಳಿಸಬೇಕು ಎಂದು EU ಆಯೋಗ ಸೂಚಿಸಿದೆ. ಅಲ್ಲದೆ, ನಿರಂತರ ಬಳಕೆಯನ್ನು ತಡೆಯಲು ಪರಿಣಾಮಕಾರಿಯಾದ ವಿರಾಮಗಳನ್ನು (Time breaks) ಕಡ್ಡಾಯವಾಗಿ ಪರಿಚಯಿಸಬೇಕು ಮತ್ತು ಕೇವಲ ಎಂಗೇಜ್‌ಮೆಂಟ್ ಹೆಚ್ಚಿಸುವ ಗುರಿ ಹೊಂದಿರುವ ತನ್ನ ರೆಕಮೆಂಡೇಶನ್ ಅಲ್ಗಾರಿದಮ್‌ಗಳನ್ನು ಬದಲಾಯಿಸಬೇಕು ಎಂದು ಆದೇಶಿಸಿದೆ.

ಒಕ್ಕೂಟದ ಆರೋಪ ತಳ್ಳಿಹಾಕಿದ ಮೆಟಾ

​ಐರೋಪ್ಯ ಒಕ್ಕೂಟದ ಈ ಗಂಭೀರ ಆರೋಪಗಳನ್ನು ಮೆಟಾ ಸಂಸ್ಥೆ ಸಾರಾಸಗಟಾಗಿ ತಳ್ಳಿಹಾಕಿದೆ. ಹದಿಹರೆಯದವರ ರಕ್ಷಣೆಗಾಗಿ ಸಂಸ್ಥೆಯು ತೆಗೆದುಕೊಂಡಿರುವ ಮಹತ್ವದ ಹೆಜ್ಜೆಗಳನ್ನು ಒಕ್ಕೂಟವು ಸರಿಯಾಗಿ ಪರಿಗಣಿಸಿಲ್ಲ ಎಂದು ಮೆಟಾ ವಕ್ತಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಈಗಾಗಲೇ ‘ಟೀನ್ ಅಕೌಂಟ್ಸ್’ (Teen Accounts) ಪರಿಚಯಿಸಿದ್ದು, ಇದು ಪೋಷಕರಿಗೆ ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ಹೆಚ್ಚಿನ ನಿಯಂತ್ರಣ ನೀಡುತ್ತದೆ. ರಾತ್ರಿ ವೇಳೆ ಇನ್‌ಸ್ಟಾಗ್ರಾಮ್ ನಿರ್ಬಂಧಿಸಲು ಹಾಗೂ ದಿನದ ಬಳಕೆಯನ್ನು ಕೇವಲ 15 ನಿಮಿಷಗಳಿಗೆ ಸೀಮಿತಗೊಳಿಸಲು ಇದು ಅವಕಾಶ ಮಾಡಿಕೊಟ್ಟಿದೆ ಎಂದು ಮೆಟಾ ಸಮರ್ಥಿಸಿಕೊಂಡಿದೆ.

ಶೇ. 6ರಷ್ಟು ದಂಡದ ಭೀತಿ

​ಮೆಟಾ ಸಂಸ್ಥೆಯು ಆಯೋಗವು ನೀಡಲಿರುವ ಅಂತಿಮ ತೀರ್ಮಾನಕ್ಕೂ ಮುನ್ನ ತನ್ನ ಮೇಲಿನ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ಅವಕಾಶ ಕಲ್ಪಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಈ ಕುರಿತು ಅಂತಿಮ ತೀರ್ಪು ಹೊರಬೀಳಲಿದ್ದು, ಒಂದು ವೇಳೆ ಆಯೋಗವು ಮೆಟಾ ಸಂಸ್ಥೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅಂತಿಮ ನಿರ್ಧಾರ ಕೈಗೊಂಡರೆ, ಮೆಟಾಗೆ ಭಾರಿ ಆರ್ಥಿಕ ಹೊಡೆತ ಬೀಳುವ ಸಾಧ್ಯತೆಯಿದೆ. ನಿಯಮ ಉಲ್ಲಂಘನೆಗಾಗಿ ಸಂಸ್ಥೆಯ ಜಾಗತಿಕ ವಾರ್ಷಿಕ ವಹಿವಾಟಿನ ಶೇಕಡಾ 6ರಷ್ಟು ದಂಡವನ್ನು ಪಾವತಿಸಬೇಕಾದ ಭೀತಿ ಮೆಟಾಗೆ ಎದುರಾಗಿದೆ.

Leave a Reply

Your email address will not be published. Required fields are marked *