ವಿದೇಶಿ ನೆಲದಲ್ಲಿ ಪ್ರಧಾನಿ ಮೋದಿಯವರ ‘No-Press Conference’ ನೀತಿಗೆ ಸತತ ಪ್ರಶ್ನೆ: ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲೂ ಮಾಧ್ಯಮಗಳ ಕಣ್ಗಾವಲು

ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸದಿರುವ (No-press-conference policy) ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದಿರುವ ವಿಚಾರ ಇದೀಗ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ನಾರ್ವೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸಗಳ ವೇಳೆ ಅವರ ‘ಏಕಮುಖ ಸಂವಹನ’ ವಿಧಾನವನ್ನು ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ವಿದೇಶಿ ಮಾಧ್ಯಮಗಳು ಬಹಿರಂಗವಾಗಿ ಪ್ರಶ್ನಿಸಿವೆ.

ನ್ಯೂಜಿಲೆಂಡ್‌ನಲ್ಲಿ ಎದುರಾದ ಪ್ರಶ್ನೆ 

ನ್ಯೂಜಿಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ, ಪತ್ರಕರ್ತರೊಬ್ಬರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಕಾರ್ಯದರ್ಶಿ (ಪೂರ್ವ) ರುದ್ರೇಂದ್ರ ಟಂಡನ್ ಅವರನ್ನು, “ಪ್ರಧಾನಿ ಮೋದಿ ಮಾಧ್ಯಮಗಳ ಪ್ರಶ್ನೆಗಳಿಗೆ ಏಕೆ ಉತ್ತರಿಸುವುದಿಲ್ಲ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಟಂಡನ್, “ನಾಗರಿಕ ಸೇವಕನಾಗಿ ಮೋದಿಯವರ ರಾಜಕೀಯ ವಿಧಾನವನ್ನು ಪ್ರಶ್ನಿಸುವುದು ನನಗೆ ಸೂಕ್ತವಲ್ಲ. ಅವರು ಅತ್ಯಂತ ಯಶಸ್ವಿ ರಾಜಕಾರಣಿ” ಎಂದಿದ್ದಾರೆ. ಅಲ್ಲದೆ, “ಭಾರತೀಯ ರಾಜಕಾರಣಿಗಳು ಹೆಚ್ಚಾಗಿ ತಮ್ಮ ಮತದಾರರೊಂದಿಗೆ ನೇರ ಸಂಪರ್ಕವನ್ನು ಹೊಂದಲು ಬಯಸುತ್ತಾರೆ. ಮಧ್ಯವರ್ತಿಗಳ ಮೂಲಕ ಮಾತನಾಡುವುದನ್ನು ಅವರು ಇಷ್ಟಪಡುವುದಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಹಾಗೂ ನಾರ್ವೆಯಲ್ಲೂ ಇದೇ ಪರಿಸ್ಥಿತಿ 

ಆಸ್ಟ್ರೇಲಿಯಾ ಭೇಟಿಯ ವೇಳೆಯೂ ಮೋದಿಯವರ ಮಾಧ್ಯಮ ನೀತಿ ಬಗ್ಗೆ ಆಸ್ಟ್ರೇಲಿಯಾದ ಟಿವಿ ವರದಿಗಾರರೊಬ್ಬರು ಮಾಡಿದ ಟೀಕೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೆಲ್ಬೋರ್ನ್‌ನಲ್ಲಿ ವರದಿಗಾರರೊಬ್ಬರು, “ಮೋದಿ ಅವರು ಸ್ಕ್ರಿಪ್ಟ್ ಮಾಡದ (Unscripted) ಸುದ್ದಿ ಗೋಷ್ಠಿಗಳನ್ನು ಕಟ್ಟುನಿಟ್ಟಾಗಿ ತಪ್ಪಿಸುತ್ತಾರೆ ಮತ್ತು ವೇದಿಕೆ ನಿರ್ವಹಿಸಿದ (Stage-managed) ಕಾರ್ಯಕ್ರಮಗಳನ್ನೇ ಹೆಚ್ಚು ಇಷ್ಟಪಡುತ್ತಾರೆ” ಎಂದು ವರದಿ ಮಾಡಿದ್ದರು.

ಇದಕ್ಕೂ ಮುನ್ನ, ಮೇ ತಿಂಗಳಲ್ಲಿ ನಾರ್ವೆಗೆ ಭೇಟಿ ನೀಡಿದ್ದಾಗಲೂ ಇದೇ ರೀತಿಯ ಘಟನೆ ನಡೆದಿತ್ತು. ನಾರ್ವೆ ಪ್ರಧಾನಿ ಜೊತೆಗಿನ ಜಂಟಿ ಕಾರ್ಯಕ್ರಮದ ಬಳಿಕ ನಿರ್ಗಮಿಸುತ್ತಿದ್ದ ಮೋದಿಯವರನ್ನು ಉದ್ದೇಶಿಸಿ ಓಸ್ಲೋ ಮೂಲದ ಪತ್ರಕರ್ತೆ ಹೆಲ್ಲೆ ಲಿಂಗ್, “ವಿಶ್ವದ ಅತ್ಯಂತ ಸ್ವತಂತ್ರ ಪತ್ರಿಕಾರಂಗದಿಂದ ನೀವು ಕೆಲವು ಪ್ರಶ್ನೆಗಳನ್ನು ಏಕೆ ತೆಗೆದುಕೊಳ್ಳಬಾರದು?” ಎಂದು ಕೂಗಿ ಕೇಳಿದ್ದರು. ಈ ವಿಡಿಯೋವನ್ನು ಇದೀಗ ಮತ್ತೆ ಹಂಚಿಕೊಂಡಿರುವ ಹೆಲ್ಲೆ ಲಿಂಗ್, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿಯುತ್ತಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಮುಂದುವರಿದಿರುವುದು ಸ್ವಾಗತಾರ್ಹ ಎಂದಿದ್ದಾರೆ. ಜೊತೆಗೆ ದೆಹಲಿಯಲ್ಲಿ ಪರೀಕ್ಷಾ ಪೇಪರ್ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಯಂತಹ ತಳಮಟ್ಟದ ಸಂಘಟನೆಗಳ ಜೊತೆ ಪ್ರಧಾನಿ ನೇರ ಸಂಪರ್ಕ ಸಾಧಿಸುತ್ತಾರೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ರಾಜಕೀಯ ಚರ್ಚೆ 

2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ ಅವರು ಒಂದೇ ಒಂದು ಸ್ವತಂತ್ರ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬುದು ಪ್ರತಿಪಕ್ಷಗಳ ಪ್ರಮುಖ ಟೀಕೆಯಾಗಿದೆ. 2023 ರಲ್ಲಿ ಅಮೆರಿಕ ಪ್ರವಾಸದ ವೇಳೆ ವಾಷಿಂಗ್ಟನ್‌ನಲ್ಲಿ ಜೋ ಬೈಡೆನ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತ್ರ ಅವರು ಅಲ್ಪಮಟ್ಟಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆ ವೇಳೆ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, “ಪ್ರಜಾಪ್ರಭುತ್ವವು ನಮ್ಮ ಡಿಎನ್‌ಎಯಲ್ಲಿದೆ, ತಾರತಮ್ಯಕ್ಕೆ ಆಸ್ಪದವೇ ಇಲ್ಲ” ಎಂದು ಪ್ರಧಾನಿ ಉತ್ತರಿಸಿದ್ದರು.

ಇತ್ತೀಚೆಗಷ್ಟೇ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳನ್ನು “ಅಪ್ರಸ್ತುತ” (Redundant) ಎಂದು ಕರೆದು, ಪ್ರಧಾನಿ ಭಾಷಣಗಳು, ಸಂಸತ್ ಅಧಿವೇಶನ, ಮನ್ ಕಿ ಬಾತ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ನೇರವಾಗಿ ತಲುಪುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ಆದರೆ, ಸ್ವತಂತ್ರ ಪತ್ರಕರ್ತರ ಪ್ರಶ್ನೆಗಳಿಗೆ ಎದುರಾಗುವುದಕ್ಕೆ ಇದ್ಯಾವುದೂ ಪರ್ಯಾಯವಲ್ಲ ಎಂದು ಪ್ರತಿಪಕ್ಷಗಳು ತಿರುಗೇಟು ನೀಡಿವೆ.

Leave a Reply

Your email address will not be published. Required fields are marked *