ಭಾರತಕ್ಕೆ ಇರಾನ್ ಸ್ನೇಹದ ಹಸ್ತ: ರಷ್ಯಾ, ಸೌದಿ ಜೊತೆಗೆ ಈಗ ಇರಾನ್‌ನಿಂದಲೂ ಹರಿದು ಬರಲಿದೆ ತೈಲ!

ನವದೆಹಲಿ: ಭಾರತದ ಬೆಳೆಯುತ್ತಿರುವ ಇಂಧನ ಅಗತ್ಯತೆಗಳ (Oil Supply) ನಡುವೆ, ಇರಾನ್ ಭಾರತದೊಂದಿಗೆ (Iran-India Relations) ತನ್ನ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಉದ್ವಿಗ್ನತೆಗಳು ತಿಳಿಗೊಂಡ ಹಿನ್ನೆಲೆಯಲ್ಲಿ, ಇರಾನಿನ ತೈಲ ಪೂರೈಕೆ ಮತ್ತು ಹಾರ್ಮುಜ್ ಜಲಸಂಧಿಗೆ (Strait of Hormuz) ಸಂಬಂಧಿಸಿದ ಆತಂಕಗಳು ದೂರವಾಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡು ಇರಾನ್ ಇದೀಗ ಭಾರತಕ್ಕೆ ಆರ್ಥಿಕ ಸಹಕಾರದ ಸ್ನೇಹ ಹಸ್ತ ಚಾಚಿದೆ.

ಇತ್ತೀಚಿನ ಭಾರತ ಭೇಟಿಯ ವೇಳೆ ಇರಾನ್ ಪೆಟ್ರೋಲಿಯಂ ಸಚಿವ ಮೊಹ್ಸೆನ್ ಪಕ್ನೆಜಾದ್ ಅವರು, “ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಭಾರತದೊಂದಿಗೆ ವ್ಯಾಪಕ ಸಹಕಾರಕ್ಕೆ ಇರಾನ್ ಸಂಪೂರ್ಣ ಸಿದ್ಧವಾಗಿದೆ” ಎಂದು ಪ್ರಕಟಿಸಿದ್ದಾರೆ. ಬ್ರಿಕ್ಸ್ (BRICS) ಇಂಧನ ಸಚಿವರ ಸಭೆಯಲ್ಲೂ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಇಂಧನ ಭದ್ರತೆ, ಪೂರೈಕೆ, ಹೂಡಿಕೆ ಮತ್ತು ಭವಿಷ್ಯದ ಜಂಟಿ ಯೋಜನೆಗಳ ಬಗ್ಗೆ ವಿವರವಾಗಿ ಮಾತುಕತೆ ನಡೆಸಲಾಗಿದೆ. ಉಭಯ ದೇಶಗಳ ನಡುವಿನ ಸಂಬಂಧ ಕೇವಲ ವ್ಯಾಪಾರಕ್ಕೆ ಸೀಮಿತವಾಗಿರದೆ, ಶತಮಾನಗಳ ಹಳೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಂಧವನ್ನು ಹೊಸ ಆರ್ಥಿಕ ಪಾಲುದಾರಿಕೆಯ ಮಟ್ಟಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ವಿಶ್ವದ ಅತಿ ದೊಡ್ಡ ತೈಲ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದರೆ, ಇರಾನ್ ಪ್ರಮುಖ ತೈಲ ಮತ್ತು ಅನಿಲ ಉತ್ಪಾದಕ ದೇಶವಾಗಿದೆ. ಇರಾನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಅನಿಲ ಲಭ್ಯವಾದರೆ ಭಾರತಕ್ಕೆ ಹೊಸ ಪೂರೈಕೆ ಆಯ್ಕೆಗಳು ದೊರೆಯಲಿವೆ. ತೈಲ-ಅನಿಲ ವಲಯದ ಹೂಡಿಕೆ, ಸಂಸ್ಕರಣಾ ಘಟಕಗಳು (Refineries) ಮತ್ತು ಪೆಟ್ರೋಕೆಮಿಕಲ್ ಯೋಜನೆಗಳಲ್ಲಿ ಭಾರತೀಯ ಕಂಪನಿಗಳು ಹೂಡಿಕೆ ಮಾಡುವ ಅವಕಾಶಗಳು ಹೆಚ್ಚಾಗಲಿದ್ದು, ಇದು ಉದ್ಯೋಗ ಸೃಷ್ಟಿ ಹಾಗೂ ವ್ಯವಹಾರ ವಿಸ್ತರಣೆಗೆ ನೆರವಾಗಲಿದೆ ಎಂದು ಆರ್ಥಿಕ ತಜ್ಞರು ನಂಬಿದ್ದಾರೆ.

ಇಂಧನ ಸಹಕಾರದ ಜೊತೆಗೆ ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧಗಳೂ ಬಲಗೊಳ್ಳುತ್ತಿವೆ. ಇತ್ತೀಚೆಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಮತ್ತು ಇರಾನ್‌ನ ಹಿರಿಯ ಭದ್ರತಾ ಅಧಿಕಾರಿ ಗದೀರ್ ನೆಜಾಮಿಪೋರ್ ನಡುವೆ ಪ್ರಮುಖ ಸಭೆ ನಡೆದಿದೆ. ಪ್ರಾದೇಶಿಕ ಪರಿಸ್ಥಿತಿ ಹಾಗೂ ಬ್ರಿಕ್ಸ್ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

ಭಾರತವು 2012-13ರ ಸುಮಾರಿಗೆ ಇರಾನ್‌ನಿಂದ ತನ್ನ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 7 ರಿಂದ 10 ರಷ್ಟು ಪಡೆಯುತ್ತಿತ್ತು. ಆದರೆ, 2019-20ರ ನಂತರ ಅಮೆರಿಕ ವಿಧಿಸಿದ ಕಠಿಣ ಆರ್ಥಿಕ ನಿರ್ಬಂಧಗಳಿಂದಾಗಿ ಆಮದು ಸ್ಥಗಿತಗೊಂಡಿತ್ತು. ಇದೀಗ 2026ರಲ್ಲಿ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಆಮದು ಪ್ರಾರಂಭವಾಗಿದೆ. ‘ಎಕನಾಮಿಕ್ ಟೈಮ್ಸ್’ ವರದಿ ಪ್ರಕಾರ, ಏಪ್ರಿಲ್ 2026 ರಲ್ಲಿ ಇರಾನ್ ಭಾರತಕ್ಕೆ ಸುಮಾರು 4 ಮಿಲಿಯನ್ ಬ್ಯಾರೆಲ್ ತೈಲವನ್ನು ಪೂರೈಸಿದೆ. ಇದು ಆ ತಿಂಗಳ ಭಾರತದ ಒಟ್ಟು ಆಮದಿನ ಸುಮಾರು ಶೇ. 7 ರಷ್ಟಾಗಿದೆ.

ಪ್ರಸ್ತುತ ಭಾರತವು ರಷ್ಯಾ, ಇರಾಕ್ ಮತ್ತು ಸೌದಿ ಅರೇಬಿಯಾ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇರಾನ್‌ನೊಂದಿಗಿನ ಸಹಕಾರ ಹೆಚ್ಚಾದರೆ ದೇಶೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ನಿಯಂತ್ರಣ ಸಾಧ್ಯವಾಗಲಿದ್ದು, ಭಾರತದ ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *