ದಕ್ಷಿಣ ಅಮೆರಿಕಾದ ವೆನೆಜುವೆಲಾ ರಾಷ್ಟ್ರದಲ್ಲಿ ಬುಧವಾರ ಸಂಜೆ ಕೆಲವೇ ನಿಮಿಷಗಳ ಅಂತರದಲ್ಲಿ ಒಂದಾದ ಮೇಲೆ ಒಂದರಂತೆ ಎರಡು ಭೀಕರ ಭೂಕಂಪಗಳು ಸಂಭವಿಸಿದ್ದು, ರಾಜಧಾನಿ ಕ್ಯಾರಕಾಸ್‌ನಲ್ಲಿ (Caracas) ಹಲವು ಬಹುಮಹಡಿ ಕಟ್ಟಡಗಳು ಧ್ವಂಸಗೊಂಡಿವೆ.
ಅಮೆರಿಕದ ಭೂಗರ್ಭ ಸಮೀಕ್ಷೆ (USGS) ವರದಿಯ ಪ್ರಕಾರ, ಮೊದಲು ಕರಾವಳಿ ಪಟ್ಟಣವಾದ ಮೊರಾನ್‌ನ ಪಶ್ಚಿಮಕ್ಕೆ 13 ಕಿ.ಮೀ ಆಳದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಾದ ಕೆಲವೇ ನಿಮಿಷಗಳ ಅಂತರದಲ್ಲಿ ಅದೇ ಪ್ರದೇಶದಲ್ಲಿ ಮತ್ತೆ 7.5 ತೀವ್ರತೆಯ ಮತ್ತೊಂದು ಅತಿ ಪ್ರಬಲ ಭೂಕಂಪ ಅಪ್ಪಳಿಸಿದೆ.

ಈ ಅವಳಿ ಭೂಕಂಪಗಳ ತೀವ್ರತೆಗೆ ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿನ ಕಟ್ಟಡಗಳು ಕುಸಿದುಬಿದ್ದಿದ್ದು, ದಟ್ಟವಾದ ಧೂಳಿನ ಮೋಡಗಳು ಆವರಿಸಿದ್ದವು. ಕಟ್ಟಡಗಳು ಅಲುಗಾಡುತ್ತಿದ್ದಂತೆ ಆತಂಕಗೊಂಡ ಜನಸಾಗರ ರಸ್ತೆಗಳಿಗೆ ಓಡಿಬಂದಿದೆ. ಈ ಭೀಕರ ದುರಂತದಲ್ಲಿ ಅಪಾರ ಸಾವು-ನೋವು ಸಂಭವಿಸಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದ್ದು, ಸಾವಿನ ಸಂಖ್ಯೆ ಹತ್ತು ಸಾವಿರದಿಂದ ಲಕ್ಷದವರೆಗೂ ಇರಬಹುದು ಎಂದು ಯುಎಸ್‌ಜಿಎಸ್ ಪ್ರಾಥಮಿಕವಾಗಿ ಎಚ್ಚರಿಸಿದೆ.
ವೆನೆಜುವೆಲಾದ ಆಂತರಿಕ ಸಚಿವ ಡಿಯೋಸ್‌ಡಾಡೊ ಕ್ಯಾಬೆಲ್ಲೊ ಅವರು ದುರಂತವನ್ನು ಖಚಿತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಮತ್ತು ಸಂತ್ರಸ್ತರಿಗೆ ನೆರವು ಒದಗಿಸಲು ತುರ್ತು ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭೂಕಂಪದ ಬೆನ್ನಲ್ಲೇ ಕ್ಯಾರಿಬಿಯನ್ ಸಮುದ್ರ ಭಾಗದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ವೆನೆಜುವೆಲಾ ಕರಾವಳಿ, ಅರುಬಾ ಮತ್ತು ಬೊನೈರ್ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಜೊತೆಗೆ ಪೋರ್ಟೊ ರಿಕೊ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಿಗೂ ಸುನಾಮಿ ಮುನ್ನೆಚ್ಚರಿಕೆಗಳನ್ನು ರವಾನಿಸಲಾಗಿತ್ತು. ಸದ್ಯ ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗಾಗಿ ರಾಷ್ಟ್ರದಾದ್ಯಂತ ತುರ್ತು ಸೇವಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.


Leave a Reply