ಕೋಲ್ಕತ್ತಾ:ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಆಡಳಿತರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷ ಇತಿಹಾಸದಲ್ಲೇ ಕಾಣದ ಮಹಾ ಸೀಳಿಕೆಗೆ ಸಾಕ್ಷಿಯಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಎದುರು ಮುಖಭಂಗ ಅನುಭವಿಸಿದ ಬೆನ್ನಲ್ಲೇ ಪಕ್ಷದೊಳಗೆ ಹೊಗೆಯಾಡುತ್ತಿದ್ದ ಅಸಮಾಧಾನ ಸ್ಫೋಟಗೊಂಡಿದ್ದು, ಬಂಡಾಯ ನಾಯಕರು ದೀರ್ಘಕಾಲದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದ್ದಾರೆ! ಇದರ ಬೆನ್ನಲ್ಲೇ ಮಮತಾ ಸೋದರಸಬಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನೂ ಪಕ್ಷದಿಂದ ಅಮಾನತುಗೊಳಿಸಿ ಆಘಾತ ನೀಡಲಾಗಿದೆ.
ಕೋಲ್ಕತ್ತಾದ ನ್ಯೂಟೌನ್ನಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ನಡೆದ ಬಂಡಾಯ ಬಣದ ತರಾತುರಿಯ ವಿಶೇಷ ರಹಸ್ಯ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರುತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಶಿಬಿರವು ಮಮತಾ ಬ್ಯಾನರ್ಜಿ ಅವರ ಅಧಿಕಾರಕ್ಕೆ ಕತ್ತರಿ ಹಾಕಿ, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಿದೆ.
ಅಭಿಷೇಕ್ ಕಾರ್ಯವೈಖರಿಗೆ ಬಂಡಾಯಗಾರರ ಬ್ರೇಕ್:
ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಏಕಪಕ್ಷೀಯ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದ ಬಂಡಾಯ ನಾಯಕರು, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸರ್ವಾನುಮತದ ಸಹಿ ಹಾಕಿದ್ದಾರೆ. ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮರಳಿ ತರಲು 20 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NWC) ರಚಿಸಲಾಗಿದ್ದು, ಇದರಲ್ಲಿ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಸೇರಿದಂತೆ 12 ಪ್ರಮುಖ ನಾಯಕರಿಗೆ ಸ್ಥಾನ ನೀಡಲಾಗಿದೆ. ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ತಕ್ಷಣವೇ ಋತಬ್ರತಾ ಬ್ಯಾನರ್ಜಿ, ಫಿರ್ಹಾದ್ ಹಕೀಮ್, ಅರೂಪ್ ರಾಯ್, ಜಾವೇದ್ ಖಾನ್ ಮತ್ತು ರತಿನ್ ಘೋಷ್ ಸೇರಿದಂತೆ ಹಲವು ಪ್ರಭಾವಿ ಶಾಸಕರು ಸಭೆ ನಡೆಸಿ, “ತಾವುಗಳೇ ಅಸಲಿ ತೃಣಮೂಲ ಕಾಂಗ್ರೆಸ್” ಎಂದು ಪ್ರಕಟಿಸಿದ್ದಾರೆ.
ಪಕ್ಷದ ಮೇಲೆ ದಶಕಗಳಿಂದ ಸಂಪೂರ್ಣ ಹಿಡಿತ ಹೊಂದಿದ್ದ ‘ದೀದಿ’ಯನ್ನೇ ಕುರ್ಚಿಯಿಂದ ಇಳಿಸಿರುವ ಈ ನಡೆ ಇಡೀ ದೇಶದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ. ಈ ಮಹಾ ಬಂಡಾಯದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಲಿ ಅಥವಾ ಅವರ ಅಧಿಕೃತ ಟಿಎಂಸಿ ನಾಯಕತ್ವವಾಗಲಿ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ಈ ಆಂತರಿಕ ಯುದ್ಧವು ಕೋರ್ಟ್ ಮೆಟ್ಟಿಲೇರುವ ಅಥವಾ ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೇ ಕಂಟಕ ತರುವ ಸಾಧ್ಯತೆಗಳಿದ್ದು, ಬಂಗಾಳದ ರಾಜಕೀಯ ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Leave a Reply