ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯಿಂದ ಇರಾನ್ ಹೊರ ನಡೆದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ದರಗಳು ದಿಢೀರ್ ಶೇ.2 ರಷ್ಟು ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಮಟ್ಟದ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82.30 ಡಾಲರ್‌ಗೆ (ಸುಮಾರು 7,700 ರೂ.) ತಲುಪಿದ್ದರೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ತೈಲದ ಬೆಲೆಯೂ ಸಹ ಪ್ರತಿ ಬ್ಯಾರೆಲ್‌ಗೆ 78 ಡಾಲರ್ (ಸುಮಾರು 7,300 ರೂ.) ಗಡಿಯನ್ನು ದಾಟಿದೆ.
ಅಮೆರಿಕ ಮತ್ತು ಇರಾನ್ ನಡುವೆ ಸ್ವಿಟ್ಜರ್ಲೆಂಡ್‌ನಲ್ಲಿ ಅತ್ಯಂತ ಸೂಕ್ಷ್ಮವಾದ ಶಾಂತಿ ಮಾತುಕತೆಗಳು ನಡೆಯುತ್ತಿದ್ದವು. ಆದರೆ, ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿರುವ ಹೊಸ ಮಿಲಿಟರಿ ಬೆದರಿಕೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಕಳೆದ ವಾರವಷ್ಟೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಕಡಿಮೆ ಮಾಡಲು 60 ದಿನಗಳ ಕದನ ವಿರಾಮ ಮತ್ತು ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದರ ಭಾಗವಾಗಿ ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಉನ್ನತ ಮಟ್ಟದ ಸಂಧಾನ ಸಭೆಗಳು ಆರಂಭವಾಗಿದ್ದವು.

ಭಾನುವಾರ ಮಹತ್ವದ ಸಭೆ ನಡೆಯುತ್ತಿದ್ದಾಗ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ಎಚ್ಚರಿಕೆ ಹೊರಬಿದ್ದಿದೆ. ಇದರಿಂದ ಕೆರಳಿದ ಇರಾನ್ ನಿಯೋಗ ತಕ್ಷಣವೇ ಮಾತುಕತೆ ವೇದಿಕೆಯಿಂದ ಹೊರನಡೆದಿದೆ. ಈ ರಾಜತಾಂತ್ರಿಕ ಬಿರುಕು ಜಾಗತಿಕ ತೈಲ ಪೂರೈಕೆಯಲ್ಲಿ ಮತ್ತೆ ವ್ಯತ್ಯಯ ಉಂಟಾಗಬಹುದು ಎಂಬ ಆತಂಕವನ್ನು ಹೂಡಿಕೆದಾರರಲ್ಲಿ ಮೂಡಿಸಿದ್ದು, ಬೆಲೆ ಏರಿಕೆಗೆ ನೇರ ಕಾರಣವಾಗಿದೆ.
ಕಳೆದ ಕೆಲವು ವಾರಗಳಲ್ಲಿ ತೈಲ ಬೆಲೆಗಳು ಬ್ಯಾರೆಲ್‌ಗೆ 73 ಡಾಲರ್ ಆಸುಪಾಸಿಗೆ ಇಳಿಕೆ ಕಂಡು ಹೂಡಿಕೆದಾರರಲ್ಲಿ ನಿರಾಳತೆ ಮೂಡಿಸಿತ್ತು. ಆದರೆ ಪ್ರಸ್ತುತ ಮೂಡಿರುವ ರಾಜತಾಂತ್ರಿಕ ಅನಿಶ್ಚಿತತೆಯು ತೈಲ ಬೆಲೆಯನ್ನು ಮತ್ತೆ ಮೇಲಕ್ಕೆ ತಳ್ಳಿದೆ. ಸ್ವಿಟ್ಜರ್ಲೆಂಡ್ ಶಾಂತಿ ಮಾತುಕತೆಯ ಮುಂದಿನ ಬೆಳವಣಿಗೆಗಳು ಜಾಗತಿಕ ಆರ್ಥಿಕತೆ ಮತ್ತು ಇಂಧನ ಮಾರುಕಟ್ಟೆಯ ಹಾದಿಯನ್ನು ನಿರ್ಧರಿಸಲಿವೆ.


Leave a Reply