ರಕ್ಷಣಾ ವಲಯದಲ್ಲಿ ಹೊಸ ಮೈಲಿಗಲ್ಲು: 3 ನೂತನ ಸ್ವದೇಶಿ ನೌಕಾ ಹಡಗುಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ Modi

ಕೋಲ್ಕತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಭಾನುವಾರ (ಜೂನ್ 21) ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯವಾಗಿ ನಿರ್ಮಿಸಲಾದ 3 ಮುಂಚೂಣಿ ನೌಕಾ ಹಡಗುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಸ್ವಾವಲಂಬಿ ಭಾರತದ ಪರಿಕಲ್ಪನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಐಎನ್‌ಎಸ್ ದುನಗಿರಿ, ಐಎನ್‌ಎಸ್ ಸಂಶೋಧಕ್ ಮತ್ತು ಐಎನ್‌ಎಸ್ ಅಗ್ರೇ ಎಂಬ 3 ನೂತನ ಯುದ್ಧನೌಕೆಗಳನ್ನು ಅವರು ಲೋಕಾರ್ಪಣೆಗೊಳಿಸಿದರು. 

ಇವುಗಳಲ್ಲಿ ‘ಸಂಶೋಧಕ್’ ನೌಕೆಯನ್ನು ಸಮುದ್ರದೊಳಗಿನ ಸರ್ವೇಕ್ಷಣೆಗಾಗಿ ಹಾಗೂ ‘ಅಗ್ರೇ’ ನೌಕೆಯನ್ನು ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಹಡಗುಗಳ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕಡಲ ಯುದ್ಧ, ಹೈಡ್ರೋಗ್ರಾಫಿಕ್ ಸರ್ವೇಯಿಂಗ್ ಮತ್ತು ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳ ಸಾಮರ್ಥ್ಯವು ಮತ್ತಷ್ಟು ಬಲವರ್ಧನೆಯಾಗಲಿದೆ.

ಈ ಪ್ರತಿಷ್ಠಿತ ಲೋಕಾರ್ಪಣೆ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಆರ್.ಎನ್. ರವಿ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಉಪಸ್ಥಿತರಿದ್ದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಯಾವುದೇ ಒಂದು ದೇಶದ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸುವಲ್ಲಿ ಬಲವಾದ ಕಡಲ ಸಾಮರ್ಥ್ಯಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಭಾರತವು ಈ ಸತ್ಯವನ್ನು ಅರಿತುಕೊಂಡಿದ್ದು, ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗುತ್ತಿದೆ ಎಂದು ವಿವರಿಸಿದರು.

ರಕ್ಷಣಾ ವಲಯದಲ್ಲಿ ಭಾರತವು ಕೇವಲ ಇತರ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ರಾಷ್ಟ್ರವಾಗಿ ಉಳಿಯಲು ಇಚ್ಛಿಸುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು. ನಮ್ಮ ದೇಶದ ಸಶಸ್ತ್ರ ಪಡೆಗಳು ಕೇವಲ ಜಗತ್ತಿನ ಮಾರುಕಟ್ಟೆಯಾಗಿರಲು ಸಾಧ್ಯವಿಲ್ಲ, ನಮ್ಮ ನೈಜ ಸಾಮರ್ಥ್ಯ ಅಡಗಿರುವುದು ಸ್ವಾವಲಂಬನೆಯಲ್ಲೇ ಹೊರತು ಇತರರಿಗೆ ಮಾರುಕಟ್ಟೆಯಾಗುವುದರಲ್ಲಲ್ಲ ಎಂದು ಅವರು ಪ್ರತಿಪಾದಿಸಿದರು. ಕಡಲ ಕೌಶಲ್ಯವಿಲ್ಲದೆ ಯಾವುದೇ ರಾಷ್ಟ್ರವು ಜಗತ್ತಿನ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ, ದೇಶದ ಅಭಿವೃದ್ಧಿ, ಭದ್ರತೆ ಮತ್ತು ಸಮೃದ್ಧಿಯು ಸಮುದ್ರದ ಮೇಲಿನ ಹಿಡಿತದೊಂದಿಗೆ ನೇರ ಸಂಪರ್ಕ ಹೊಂದಿದೆ. ಅತ್ಯುನ್ನತ ಕಡಲ ಸಾಮರ್ಥ್ಯಗಳನ್ನು ಹೊಂದಿರುವ ದೇಶವು ಮಾತ್ರ ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗಿರುತ್ತದೆ ಮತ್ತು ಹೆಚ್ಚಿನ ಆರ್ಥಿಕ ಹಾಗೂ ಕಾರ್ಯತಂತ್ರದ ಪ್ರಭಾವವನ್ನು ಬೀರಬಲ್ಲದು ಎಂದು ಪ್ರಧಾನಿ ಮೋದಿ ನುಡಿದರು.

Leave a Reply

Your email address will not be published. Required fields are marked *