ನವದೆಹಲಿ: ದೇಶಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಔಷಧಿಗಳ ದುರ್ಬಳಕೆಗೆ ಬ್ರೇಕ್ ಹಾಕಲು ಕೇಂದ್ರ ಆರೋಗ್ಯ ಇಲಾಖೆ ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ಮುಂದೆ ಸಾರ್ವಜನಿಕರು ಯಾವುದೇ ಮೆಡಿಕಲ್ ಶಾಪ್‌ಗಳಲ್ಲಿ ನೇರವಾಗಿ ತಾವೇ ಹೋಗಿ ಸಿರಪ್‌ಗಳನ್ನು (Syrup) ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೊಸ ನಿಯಮಗಳ ಪ್ರಕಾರ, ನೋಂದಾಯಿತ ವೈದ್ಯರ ಅಧಿಕೃತ ಶಿಫಾರಸು ಪತ್ರ (Prescription) ಇಲ್ಲದೇ ಯಾವುದೇ ರೀತಿಯ ಸಿರಪ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡುವಂತಿಲ್ಲ. ಕೇವಲ ಗಂಭೀರ ಕಾಯಿಲೆಗಳ ಔಷಧಿಗಳಷ್ಟೇ ಅಲ್ಲದೆ, ಸಾಮಾನ್ಯ ಕೆಮ್ಮು, ಶೀತ, ಜ್ವರ ಅಥವಾ ಯಾವುದೇ ದ್ರವರೂಪದ ಸಿರಪ್ ಆಧಾರಿತ ಸೂತ್ರೀಕರಣಗಳ (Syrup-based formulations) ಖರೀದಿಗೂ ಈಗ ವೈದ್ಯರ ಚೀಟಿ ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರವು ಈ ಬಿಗಿಯಾದ ನಿಯಂತ್ರಣವನ್ನು ತರಲು 1945 ರ ಔಷಧ ನಿಯಮಗಳಿಗೆ (Drugs Rules, 1945) ಮಹತ್ವದ ತಿದ್ದುಪಡಿ ತಂದಿದೆ. ನಿಯಮದ ‘ವೇಳಾಪಟ್ಟಿ K’ (Schedule K) ಅಡಿಯಲ್ಲಿ ಇದುವರೆಗೆ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಲ್ಲಿದ್ದ ‘ಸಿರಪ್‌ಗಳು’ ಎಂಬ ಪದವನ್ನು ಈಗ ಅಧಿಕೃತವಾಗಿ ತೆಗೆದುಹಾಕಲಾಗಿದೆ. ಈ ತಿದ್ದುಪಡಿಯ ಮೂಲಕ ಇನ್ಮುಂದೆ ಕೆಮ್ಮಿನ ಸಿರಪ್‌ಗಳು ಸೇರಿದಂತೆ ಯಾವುದೇ ಸಿರಪ್‌ಗಳ ಓವರ್-ದಿ-ಕೌಂಟರ್ (OTC – ನೇರ ಖರೀದಿ) ಮಾರಾಟವನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದುವರೆಗೆ ಜನರು ಸಣ್ಣಪುಟ್ಟ ಶೀತ, ಕೆಮ್ಮಿಗೆ ನೇರವಾಗಿ ಫಾರ್ಮಸಿಗಳಿಂದ ಸಿರಪ್ ಖರೀದಿಸುತ್ತಿದ್ದರು, ಆದರೆ ಇನ್ಮುಂದೆ ಈ ಉತ್ಪನ್ನಗಳನ್ನು ಪಡೆಯುವ ಮುನ್ನ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಅವರಿಂದ ಚೀಟಿ ಪಡೆಯಬೇಕಾಗುತ್ತದೆ.

Leave a Reply