ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: Subsidy ಸಿಲಿಂಡರ್ ಸಂಖ್ಯೆ 9 ರಿಂದ 4 ಕ್ಕೆ ಇಳಿಸಿದ ಕೇಂದ್ರ ಸರ್ಕಾರ!

ನವದೆಹಲಿ: ದೇಶೀಯ ಎಲ್‌ಪಿಜಿ ಸಿಲಿಂಡರ್ ದರವನ್ನು 29 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ಮತ್ತೊಂದು ಭಾರಿ ಆಘಾತ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಅಡಿಯಲ್ಲಿ ದೇಶದ ಸುಮಾರು 10.5 ಕೋಟಿ ಬಡ ಕುಟುಂಬಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿ ದರದ (ಸಬ್ಸಿಡಿ) ಸಿಲಿಂಡರ್‌ಗಳ ಸಂಖ್ಯೆಯನ್ನು ವಾರ್ಷಿಕವಾಗಿ 9 ರಿಂದ 4 ಕ್ಕೆ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.

​ಪೆಟ್ರೋಲಿಯಂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಎಂ. ಖಾನೂಜಾ ಅವರು ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣ ಹಾಗೂ ಹೆಚ್ಚುತ್ತಿರುವ ಸಬ್ಸಿಡಿ ಹೊರೆಯನ್ನು ನಿಯಂತ್ರಿಸಲು ಸರ್ಕಾರ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಹೊಸ ನಿಯಮದ ಲೆಕ್ಕಾಚಾರವೇನು?

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇನ್ನು ಮುಂದೆ ವರ್ಷಕ್ಕೆ ಕೇವಲ ಮೊದಲ 4 ಸಿಲಿಂಡರ್ ರೀಫಿಲ್‌ಗಳಿಗೆ ಮಾತ್ರ ತಲಾ 300 ರೂಪಾಯಿಗಳ ನೇರ ನಗದು ವರ್ಗಾವಣೆ (DBT) ಸಬ್ಸಿಡಿ ಸಿಗಲಿದೆ. ವರ್ಷವೊಂದರಲ್ಲಿ 4 ಸಿಲಿಂಡರ್ ಬಳಕೆಯಾದ ನಂತರ ಪಡೆಯುವ ಉಳಿದ ಸಿಲಿಂಡರ್‌ಗಳಿಗೆ ಗ್ರಾಹಕರು ಮಾರುಕಟ್ಟೆಯ ಪೂರ್ಣ ದರವನ್ನು ಪಾವತಿಸಬೇಕಾಗುತ್ತದೆ.

ಕಳೆದ ವರ್ಷ 9 ಇತ್ತು: ಕಳೆದ 2025ರ ಆಗಸ್ಟ್‌ನಲ್ಲಿ ಕೇಂದ್ರ ಸಚಿವ ಸಂಪುಟವು ಉಜ್ವಲ ಗ್ರಾಹಕರಿಗೆ ವರ್ಷಕ್ಕೆ 9 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲು ಅನುಮೋದಿಸಿತ್ತು. ಆದರೆ, ಈಗ ಅದನ್ನು ದಿಢೀರ್ ಆಗಿ 4 ಕ್ಕೆ ಇಳಿಸಲಾಗಿದೆ. ಒಂದು ಸಾಮಾನ್ಯ ಉಜ್ವಲ ಕುಟುಂಬದ ಸರಾಸರಿ ವಾರ್ಷಿಕ ಬಳಕೆ 4 ಸಿಲಿಂಡರ್ ಆಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತೈಲ ಕಂಪನಿಗಳ ನಷ್ಟದ ಹಿನ್ನೆಲೆ:

​ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಗಗನಕ್ಕೇರಿವೆ. ದೇಶದ ಮೂರು ಪ್ರಮುಖ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು (OMCs) ಪ್ರತಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಮೇಲೆ ಇಂದಿಗೂ ಸುಮಾರು 700 ರೂಪಾಯಿಗಳಷ್ಟು ನಷ್ಟ (Under-recovery) ಅನುಭವಿಸುತ್ತಿವೆ. ಇದರ ಜೊತೆಗೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 6 ರೂ. ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 30 ರೂ. ನಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

​ಜಾಗತಿಕ ಬೆಲೆಗಳಿಗೆ ಹೋಲಿಸಿದರೆ ಭಾರತದ ಸಾಮಾನ್ಯ ಗ್ರಾಹಕರಿಗೆ (ಒಟ್ಟು 33.3 ಕೋಟಿ ಗ್ರಾಹಕರು) ಇಂದಿಗೂ ಮಾರುಕಟ್ಟೆ ದರಕ್ಕಿಂತ 700 ರೂ. ಅಗ್ಗವಾಗಿ ಸಿಲಿಂಡರ್ ನೀಡಲಾಗುತ್ತಿದೆ. ಈ ಭಾರಿ ನಷ್ಟದಿಂದಾಗಿ 2025-26ನೇ ಸಾಲಿನಲ್ಲಿ ತೈಲ ಕಂಪನಿಗಳ ಒಟ್ಟು ನಷ್ಟದ ಹೊರೆ 60,000 ಕೋಟಿ ರೂಪಾಯಿಗಳಿಗೆ ತಲುಪಿತ್ತು. ಹೀಗಾಗಿ ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ತಡೆಡಿಯಲು ಮತ್ತು ಸಬ್ಸಿಡಿ ಬಿಲ್ ನಿಯಂತ್ರಿಸಲು ಸರ್ಕಾರ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಗೆ ಕತ್ತರಿ ಹಾಕಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ (West Asia) ನಡೆಯುತ್ತಿರುವ ಯುದ್ಧದ ಭೀತಿಯು ಈ ಜಾಗತಿಕ ತೈಲ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.

Leave a Reply

Your email address will not be published. Required fields are marked *