
ಯಲ್ಲಾಪುರ: ತಾಲೂಕಿನ ಮಂಚಿಕೇರಿ ಸಮೀಪದ ಶಿರನಾಲಾ–ಮಾಸ್ತಿಜಡ್ಡಿ ಗ್ರಾಮದ ಕೃಷಿಕ ನಾರಾಯಣ ಭಟ್ ಅವರ ಮನೆಯಂಗಳದಲ್ಲೇ ಚಿರತೆಯೊಂದು ರಾಜಾರೋಷವಾಗಿ ಕಾಣಿಸಿಕೊಂಡಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕಾಡಿನಲ್ಲಿ ಇರಬೇಕಾದ ಕಾಡುಪ್ರಾಣಿ ನೇರವಾಗಿ ಮನೆ ಅಂಗಳಕ್ಕೇ ಬಂದು ಓಡಾಡುತ್ತಿರುವುದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ವಿಶೇಷವಾಗಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಈ ಭಾಗದ ರೈತರು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ತೋಟ, ಗದ್ದೆಗಳಿಗೆ ತೆರಳಬೇಕಾದ ಅನಿವಾರ್ಯತೆಯಿದೆ. ಇಂತಹ ಸಂದರ್ಭದಲ್ಲಿ ಚಿರತೆ ಮನೆಯಂಗಳದಲ್ಲೇ ಕಾಣಿಸಿಕೊಂಡಿರುವುದು ಜನರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಭಾಗದಲ್ಲಿ ಚಿರತೆಗಳ ಸಂಚಾರದಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಚಿರತೆಯ ಚಲನವಲನ ಪತ್ತೆಹಚ್ಚಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು.
ಮನೆಯಂಗಳದವರೆಗೂ ಕಾಡುಪ್ರಾಣಿಗಳ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
















Leave a Reply