

ಶಿರಸಿ: ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಮಾರಕವಾಗಲಿವೆ ಎನ್ನಲಾದ ಬೇಡ್ತಿ–ಹಿರೇವಡ್ಡಟ್ಟಿ (ಬೇಡ್ತಿ–ವರದಾ) ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಮರುಪರಿಶೀಲಿಸಿ ಕೈಬಿಡುವಂತೆ ಒತ್ತಾಯಿಸಿ, ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಶಿರಸಿಯಲ್ಲಿ ಸಚಿವರನ್ನು ಭೇಟಿಯಾದ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನಿಯೋಗವು, ನವೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿತು. ಈ ವೇಳೆ ಕಳೆದ ಒಂದು ವರ್ಷದಿಂದ ನಡೆದ ಹೋರಾಟದ ವಿವರ ಹಾಗೂ ತಜ್ಞರ ವರದಿಯನ್ನು ಸಲ್ಲಿಸಿ, ಯೋಜನೆಗಳಿಂದ ಉಂಟಾಗಬಹುದಾದ ಗಂಭೀರ ಪರಿಸರ ಪರಿಣಾಮಗಳ ಕುರಿತು ಚರ್ಚಿಸಿತು.
ಮನವಿಗೆ ಸ್ಪಂದಿಸಿದ ಸಚಿವ ಲಕ್ಷ್ಮಣ ಸವದಿ ಅವರು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಸಮಿತಿಯ ಪ್ರಮುಖರ ಸಭೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಂಚಾಲಕರಾದ ರಮೇಶ ದುಭಾಷಿ, ದೀಪಕ ದೊಡ್ಡೂರು, ಅನಂತಮೂರ್ತಿ ಹೆಗಡೆ, ಸುರೇಶ ಹಕ್ಕಿಮನೆ ಹಾಗೂ ಗಣಪತಿ ಕೆ. ಬಿಸಲಕೊಪ್ಪ ಉಪಸ್ಥಿತರಿದ್ದರು.

















Leave a Reply