ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದಿಂದ ಭೀಕರ ವೈಮಾನಿಕ ದಾಳಿ: 11 ಮಕ್ಕಳು ಸೇರಿ 13 ಮಂದಿ ಸಾ*ವು!

ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ಮತ್ತೊಮ್ಮೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, 11 ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ದಾರುಣವಾಗಿ ಸಾ*ವನ್ನಪ್ಪಿದ್ದಾರೆ. ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬೀಹುಲ್ಲಾ ಮುಜಾಹಿದ್ ಈ ವಿಷಯವನ್ನು ಬುಧವಾರ ಖಚಿತಪಡಿಸಿದ್ದು, ಪಾಕಿಸ್ತಾನದ ಸೇನೆಯು ಖೋಸ್ಟ್, ಕುನಾರ್ ಮತ್ತು ಪಕ್ಟಿಕಾ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಿದೆ ಎಂದು ತಿಳಿಸಿದ್ದಾರೆ. 

ಈ ಘಟನೆಯಲ್ಲಿ 11 ಮಕ್ಕಳೊಂದಿಗೆ ಓರ್ವ ಮಹಿಳೆ ಹಾಗೂ ಓರ್ವ ವೃದ್ಧರು ಕೂಡ ಪ್ರಾಣ ಕಳೆದುಕೊಂಡಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಮ್ಮ ವಾಯುಪ್ರದೇಶವನ್ನು ಉಲ್ಲಂಘಿಸಿ ನಾಗರಿಕರ ಮನೆಗಳ ಮೇಲೆ ಬಾಂಬ್ ಹಾಕಲಾಗಿದೆ ಎಂದು ತಾಲಿಬಾನ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ದಾಳಿಯ ಬಗ್ಗೆ ಪಾಕಿಸ್ತಾನದ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.

ಉಗ್ರರ ದಾಳಿಗೆ ಪ್ರತೀಕಾರದ ಕ್ರಮ

ಪಾಕಿಸ್ತಾನದ ಗಡಿಭಾಗದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹಸನ್ ಖೇಲ್ ಪ್ರದೇಶದಲ್ಲಿರುವ ಭದ್ರತಾ ನೆಲೆಯ ಮೇಲೆ ಪಾಕಿಸ್ತಾನಿ ತಾಲಿಬಾನ್ (TTP) ಉಗ್ರರು ಮಂಗಳವಾರ ಭಾರಿ ದಾಳಿ ನಡೆಸಿದ ಬೆನ್ನಲ್ಲೇ ಈ ವೈಮಾನಿಕ ಕಾರ್ಯಾಚರಣೆ ನಡೆದಿದೆ. ಉಗ್ರರ ದಾಳಿಯಿಂದಾಗಿ ಪಾಕಿಸ್ತಾನದ ಆರು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು ಹಾಗೂ ಹಲವರು ಗಾಯಗೊಂಡಿದ್ದರು. ಇದೇ ವೇಳೆ ಪಾಕಿಸ್ತಾನದ ಸೇನೆಯು ಎಂಟು ಮಂದಿ ಉಗ್ರರನ್ನು ಹತ್ಯೆ ಮಾಡಿ, ಭದ್ರತಾ ನೆಲೆಯನ್ನು ವಶಪಡಿಸಿಕೊಳ್ಳುವ ಯತ್ನವನ್ನು ವಿಫಲಗೊಳಿಸಿತ್ತು. ಈ ಘಟನೆಯಿಂದ ರೊಚ್ಚಿಗೆದ್ದ ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದೊಳಗೆ ನುಗ್ಗಿ ಈ ಪ್ರತೀಕಾರದ ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಕಳೆದ ಫೆಬ್ರವರಿಯಿಂದಲೂ ಗಡಿ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಂಡಿದೆ. ಪಾಕಿಸ್ತಾನಿ ತಾಲಿಬಾನ್ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಹಾಗೂ ಅಲ್ಲಿಂದಲೇ ಪಾಕಿಸ್ತಾನದ ಒಳಗೆ ಉಗ್ರರ ದಾಳಿಗಳು ನಿರಂತರವಾಗಿ ನಡೆಯುತ್ತಿವೆ ಎಂಬುದು ಇಸ್ಲಾಮಾಬಾದ್‌ನ ಪ್ರಮುಖ ಆರೋಪವಾಗಿದೆ. ಆದರೆ ಅಫ್ಘಾನಿಸ್ತಾನ ಸರ್ಕಾರವು ಈ ಆರೋಪಗಳನ್ನು ಮೊದಲಿನಿಂದಲೂ ತಳ್ಳಿಹಾಕುತ್ತಲೇ ಬಂದಿದೆ. ಇತ್ತೀಚೆಗೆ ಚೀನಾದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದ್ದರೂ, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಾಗೆಯೇ ಮುಂದುವರಿದಿದ್ದು, ಎರಡೂ ಕಡೆಯಿಂದ ನಡೆಯುತ್ತಿರುವ ದಾಳಿ-ಪ್ರತಿದಾಳಿಗಳಲ್ಲಿ ಅಪಾರ ಸಂಖ್ಯೆಯ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *