Vietnamನಲ್ಲಿ ಭೀಕರ ಬೋಟ್ ದುರಂತ: ಭಾರತದ 15 ಪ್ರವಾಸಿಗರು ಜಲಸಮಾಧಿ!

ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫೂ ಕ್ವೋಕ್ (Phu Quoc) ದ್ವೀಪದ ಸಮೀಪ ಪ್ರವಾಸಿಗರಿದ್ದ ಬೋಟ್ ಒಂದು ಸಮುದ್ರದಲ್ಲಿ ಮುಳುಗಿದ ಪರಿಣಾಮ ಭಾರತದ 15 ಪ್ರವಾಸಿಗರು ದುರಂತವಾಗಿ ಸಾವನ್ನಪ್ಪಿದ್ದಾರೆ. ವಿಯೆಟ್ನಾಂನ ಅತಿ ದೊಡ್ಡ ದ್ವೀಪವಾದ ಫೂ ಕ್ವೋಕ್ ಸಮೀಪದ ಹಾನ್ ಮೇ ರುತ್ ನ್ಗೋಯ್ ದ್ವೀಪದಿಂದ ಸುಮಾರು 400 ಮೀಟರ್ (1,310 ಅಡಿ) ದೂರದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಅನ್ವಯ, ಅಪಘಾತಕ್ಕೀಡಾದ ಬೋಟ್‌ನಲ್ಲಿ ಒಟ್ಟು 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ಕು ಜನ ಸಿಬ್ಬಂದಿ ಇದ್ದರು. ದ್ವೀಪದ ಸಮೀಪ ಚಲಿಸುತ್ತಿದ್ದಾಗ ಏಕಾಏಕಿ ಬೋಟ್ ಮಗುಚಿ ಬಿದ್ದಿದೆ. ಘಟನೆ ಸಂಭವಿಸುತ್ತಿದ್ದಂತೆ ಹತ್ತಿರದಲ್ಲಿದ್ದ ಇತರ ಬೋಟ್‌ಗಳು ತಕ್ಷಣವೇ ರಕ್ಷಣೆಗೆ ಧಾವಿಸಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ಯತ್ನಿಸಿವೆ. 

ತದನಂತರ ಗಡಿ ಭದ್ರತಾ ಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ರಕ್ಷಣಾ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಬೋಟ್ ಸಂಪೂರ್ಣವಾಗಿ ಉಲ್ಟಾ ಆಗಿದ್ದರಿಂದ ಹಲವು ಪ್ರವಾಸಿಗರು ಅದರ ಒಳಗೇ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯುಂಟುಮಾಡಿತು. ಸದ್ಯ ಕಾರ್ಯಾಚರಣೆ ವೇಳೆ 21 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರಂತದಲ್ಲಿ ಮೃತಪಟ್ಟ ಎಲ್ಲಾ 15 ಭಾರತೀಯರ ಶವಗಳನ್ನು ಹೊರತೆಗೆಯಲಾಗಿದೆ. 

ಪ್ರಾಥಮಿಕ ವರದಿಗಳ ಪ್ರಕಾರ, ಸಮುದ್ರದಲ್ಲಿ ಬೀಸಿದ ಭಾರಿ ಗಾಳಿ ಮತ್ತು ಎದ್ದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ಸ್ಪೀಡ್‌ಬೋಟ್ ಮಗುಚಿ ಬಿದ್ದಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಸಹಾಯಕ್ಕಾಗಿ ಕಂಟ್ರೋಲ್ ರೂಮ್ ಸ್ಥಾಪನೆ: ಬೋಟ್ ದುರಂತಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ತುರ್ತು ನೆರವಿಗಾಗಿ ಭಾರತೀಯ ರಾಯಭಾರ ಕಚೇರಿಯು ಹೋ ಚಿ ಮಿನ್ ಸಿಟಿಯಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಹಾಗೂ ಹನೋಯಿ (Hanoi) ನಲ್ಲಿರುವ ರಾಯಭಾರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆದಿದೆ. ಸಾರ್ವಜನಿಕರು ಹಾಗೂ ಸಂತ್ರಸ್ತರ ಕುಟುಂಬಸ್ಥರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:

  • ಹೋ ಚಿ ಮಿನ್ ಸಿಟಿ ಕಂಟ್ರೋಲ್ ರೂಮ್: +84 36 281 7930, +84 91 552 37 14 ಮತ್ತು +84 33 452 0414
  • ಹನೋಯಿ ರಾಯಭಾರ ಕಚೇರಿ ಕಂಟ್ರೋಲ್ ರೂಮ್: +84 91 308 9165

Leave a Reply

Your email address will not be published. Required fields are marked *